ರಾಜ್ಯ

ಸಂವಹನದ ಕೊರತೆ ಎಡವಟ್ಟು; ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ್ದ ಸಿಎಂ ಬೆಂಗಾವಲು ವಾಹನ

Srinivas Rao BV

ಬೆಂಗಳೂರು: ಸಿಎಂ ಬೊಮ್ಮಾಯಿ ತೆರಳುತ್ತಿದ್ದ ಕಾರು ಸಂವಹನದ ಕೊರತೆಯ ಕಾರಣದಿಂದಾಗಿ ಬೆಂಗಾವಲು ವಾಹನದ ಸಹಿತ ಟ್ರಾಫಿಕ್ ನಲ್ಲಿ ಸಿಲುಕಿದ ಘಟನೆ ಡಿ.27 ರಂದು ನಡೆದಿದೆ. 

ನಗರದಲ್ಲಿ ಮೂರು ಕಾರ್ಯಕ್ರಮಗಳಿಗೆ ಸಿಎಂ ತೆರಳುವುದು ನಿಗದಿಯಾಗಿತ್ತು. ವಿಧಾನಸೌಧದಲ್ಲಿ ಎಲೆಕ್ಟ್ರಿಕ್ ಬಸ್ ಗಳನ್ನು ಲೋಕಾರ್ಪಣೆಗೊಳಿಸಿದ ಬಳಿಕ ಸಿಎಂ ಕಾರ್ಪೊರೇಷನ್ ಸರ್ಕಲ್ ನಲ್ಲಿ ಕೃಷಿ ಭವನ-2 ನ್ನು ಉದ್ಘಾಟಿಸಿದರು. ಅಲ್ಲಿಂದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಕೋವಿಡ್-19 ಸಂತ್ರಸ್ತ ಕುಟುಂಬ ಸದಸ್ಯರಿಗೆ ಪರಿಹಾರ ವಿತರಣೆ ಕಾರ್ಯಕ್ರಮದಲ್ಲಿ ಸಿಎಂ ಭಾಗವಹಿಸಬೇಕಿತ್ತು.
 
ಕೃಷಿ ಭವನದ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತಿದ್ದಂತೆಯೇ ಬೆಂಗಾವಲು ಪಡೆಗೆ ಸಿಎಂ ತಮ್ಮ ಅಧಿಕೃತ ನಿವಾಸಕ್ಕೆ ತೆರಳುತ್ತಿದ್ದಾರೆ ಎಂಬ ಸಂದೇಶ ರವಾನೆಯಾಗಿದೆ. ಬೆಂಗಾವಲು ಪಡೆ ನ್ಯಾಷನಲ್ ಕಾಲೇಜು ಮೈದಾನಕ್ಕೆ ತೆರಳುವುದನ್ನು ಬಿಟ್ಟು ಸಿಎಂ ಅಧಿಕೃತ ನಿವಾಸದತ್ತ ತೆರಳಿದೆ. 

ಕೆಲವೇ ಕ್ಷಣಗಳಲ್ಲಿ ಸಿಎಂ ತಂಡ ಇದನ್ನು ಅರಿತಿದ್ದು ಎಡವಟ್ಟು ಸರಿ ಮಾಡಿಕೊಳ್ಳುವುದಕ್ಕೆ ಮುಂದಾಗಿದೆ. ಆದರೆ ಆ ವೇಳೆಗೆ ಆಗಲೇ ಸಿಎಂ ಬೆಂಗಾವಲು ಪಡೆ ವಾಹನ ಟ್ರಾಫಿಕ್ ನಲ್ಲಿ ಸಿಲುಕಿತ್ತು. ಸಿಎಂ ಬೆಂಗಾವಲು ಪಡೆ ವಾಹನ ನಗರದ ಅತ್ಯಂತ ವಾಹನ ದಟ್ಟಣೆ ಇರುವ ಸ್ಥಳಗಳಲ್ಲಿ ಸಂಚರಿಸಿ ನೃಪತುಂಗಾ ರಸ್ತೆಯಲ್ಲಿ ಸಿಲುಕಿತ್ತು. 

ಸಿಎಂ ಬೆಂಗಾವಲು ವಾಹನ ಬರಲಿದೆ ಎಂಬ ಸಣ್ಣ ಸುಳಿವೂ ಇಲ್ಲದ ಟ್ರಾಫಿಕ್ ಪೊಲೀಸರಿಗೆ ದಿಢೀರ್ ಸವಾಲು ಎದುರಾಗಿ ದಾರಿ ಮಾಡಿಕೊಡುವುದಕ್ಕೆ ಹರಸಾಹಸ ಪಡಬೇಕಾಯಿತು. ಕಾರ್ಪೊರೇಷನ್ ಸರ್ಕಲ್ ಗೆ ಬೆಂಗಾವಲು ಪಡೆ ತಲುಪುತ್ತಿದ್ದಂತೆಯೇ ನ್ಯಾಷನಲ್ ಕಾಲೇಜು ಮೈದಾನಕ್ಕೆ ಸುಗಮವಾಗಿ ಸಂಚರಿಸುವಂತೆ ವ್ಯವಸ್ಥೆ ಮಾಡಲಾಯಿತು. 

SCROLL FOR NEXT