ರಾಜ್ಯ

ಮುಂಬರುವ ದಿನಗಳಲ್ಲಿ ಜನತೆ ಬೆಂಗಳೂರಿನಲ್ಲಿ ಬದಲಾವಣೆಗಳನ್ನು ಕಾಣಲಿದೆ: ಸಿಎಂ ಬೊಮ್ಮಾಯಿ

Manjula VN

ಬೆಂಗಳೂರು: ನಗರವನ್ನು ಸುಧಾರಿಸಲು ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸಾಕಷ್ಟು ಕಾಲಾವಕಾಶಗಳನ್ನು ನೀಡಲಾಗಿದ್ದು, ಮುಂಬರುವ ದಿನಗಳಲ್ಲಿ ಜನತೆ ಬೆಂಗಳೂರಿನಲ್ಲಿ ಬದಲಾವಣೆಗಳನ್ನು ನೋಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸೋಮವಾರ ಹೇಳಿದ್ದಾರೆ.

ಸೋಮವಾರ ಬೆಂಗಳೂರಿನಲ್ಲಿ ಫಲಾನುಭವಿಗೆ ಪರಿಹಾರದ ಚೆಕ್ ಹಸ್ತಾಂತರಿಸಿದ ಬಳಿಕ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿಗಳು, ಇಲ್ಲಿಯವರೆಗೆ, ಮೂಲಸೌಕರ್ಯ ಕಾಮಗಾರಿಗಳ ವಿಳಂಬಕ್ಕೆ ನೈಸರ್ಗಿಕ ಕಾರಣಗಳು ಕಾರಣವಾಗಿದ್ದು, ಆದರೆ ಇನ್ನು ಮುಂದೆ ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಮೃದುತ್ವವನ್ನು ತೋರಿಸುವುದಿಲ್ಲ ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ, ಜನರು ಬೆಂಗಳೂರಿನಲ್ಲಿ ಪ್ರಮುಖ ರಸ್ತೆಗಳಲ್ಲಿ ಮಾತ್ರವಲ್ಲದೇ ಪ್ರತಿ ವಾರ್ಡ್‌ನ ರಸ್ತೆಗಳಲ್ಲಿಯೂ ಸಾಕಷ್ಟು ಸುಧಾರಣೆಯನ್ನು ಕಾಣಲಿದ್ದಾರೆ. ಬೆಂಗಳೂರಿನ ಅಭಿವೃದ್ಧಿ ಮತ್ತು ಬೆಂಗಳೂರಿಗರ ಒಳಿತಿಗಾಗಿ ಸರ್ಕಾರ ಕೆಲಸ ಮಾಡುತ್ತಿದೆ. ರಸ್ತೆ ನಕ್ಷೆಯನ್ನು ಸಿದ್ಧಪಡಿಸಲಾಗುತ್ತಿದ್ದು, ಪ್ರತಿ ಯೋಜನೆಗೆ ಗಡುವು ನಿಗದಿಪಡಿಸಲಾಗುತ್ತದೆ. ಈ ಮೊದಲು ಯೋಜನೆಗಳಿಗೆ ಸಮಯ ನಿಗದಿಪಡಿಸಲಾಗುತ್ತಿರಲಿಲ್ಲ. ಆದರೆ ಈಗ ಎಲ್ಲಾ ನಾಲ್ಕು ಸರ್ಕಾರಿ ಸಂಸ್ಥೆಗಳು (BBMP, BWSSB, BESCOM ಮತ್ತು BDA) ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ ಮತ್ತು ಕಡಿಮೆ, ನಿಗದಿತ ಸಮಯದ ಚೌಕಟ್ಟಿನಲ್ಲಿ ಕೆಲಸವನ್ನು ಪೂರ್ಣಗೊಳಿಸಬೇಕಾಗುತ್ತದೆ ಎಂದು ಹೇಳಿದರು.

ಕಳೆದ ಬಾರಿಯ ಸಿಟಿ ರೌಂಡ್ಸ್ ನಲ್ಲಿ ಚರಂಡಿ ಅತಿಕ್ರಮಣ ತೆರವಿಗೆ ಹಾಗೂ ಅತಿಕ್ರಮಣದಾರರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಇದರಂತೆ ಬೆಂಗಳೂರು ಅಭಿವೃದ್ಧಿಗೆ ಕೆಲಸ ಮಾಡಲಾಗುತ್ತಿದೆ. ಈ ಕುರಿತ ಫಲಿತಾಂಶಗಳು ಶೀಘ್ರದಲ್ಲೇ ಗೋಚರಿಸಲಿದೆ ಎಂಬ ಭರವಸೆಯನ್ನು ನಾನು ನೀಡುತ್ತೇನೆ. ದಿಢೀರ್ ಭೇಟಿಯಿಂದ ನಗರದ ಅಭಿವೃದ್ಧಿಯನ್ನು ಪರಿಶೀಲಿಸುತ್ತೇನೆಂದು ಹೇಳಿದ್ದಾರೆ.

ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಮುಂಬರುವ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಇಂತಹ ಹೇಳಿಕೆಗಳು ಹೊರ ಬರುತ್ತಿವೆ. ಬಿಜೆಪಿ ಸರ್ಕಾರ, ಶಾಸಕರು, ಸಂಸದರು ಮತ್ತು ಎಂಎಲ್'ಸಿಗಳು ಮತದಾರರ ಮನವೊಲಿಸಲು ತಮ್ಮ ಕೆಲಸವನ್ನು ಆರಂಭಿಸಿದ್ದಾರೆಂದು ತಿಳಿಸಿದ್ದಾರೆ.

SCROLL FOR NEXT