ರಾಜ್ಯ

ಬಿಲ್ ಪಾವತಿ ಕುರಿತು ಮಾತಿನ ಚಕಮಕಿ: ಡಾಬಾಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು, ಸಿಬ್ಬಂದಿ ಸಾವು

Manjula VN

ಬೆಂಗಳೂರು: ಊಟ ಮಾಡಿದ ಬಿಲ್‌ ಪಾವತಿಸಿ ಎಂದು ಕೇಳಿದ್ದಕ್ಕೆ ಡಾಬಾಗೆ ಪೆಟ್ರೋಲ್‌ ಸುರಿದು ಬೆಂಕಿ ಹೆಚ್ಚಿದ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಡಾಬಾ ಸಿಬ್ಬಂದಿಯೋರ್ವ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ.

ಹಾಸನ ಮೂಲದ ದೊಡ್ಡ ಬ್ಯಾಲೆಕೆರೆಯಲ್ಲಿ ನೆಲೆಸಿದ್ದ ಮನೋಜ್‌ (29) ಮೃತ ವ್ಯಕ್ತಿ. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಸೋಲದೇವನಹಳ್ಳಿ ಪೊಲೀಸರು, ದುಷ್ಕರ್ಮಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಹೆಸರಘಟ್ಟ ಮುಖ್ಯರಸ್ತೆ ಸಮೀಪದ ನೆಲಮಂಗಲ ಹೆದ್ದಾರಿಯ ಯು-ಟರ್ನ್ ಡಾಬಾದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ.

ರಾತ್ರಿ 10 ಗಂಟೆ ಸುಮಾರಿಗೆ ಡಾಬಾಗೆ ಬಂದಿರುವ ದುಷ್ಕರ್ಮಿಗಳ ಗುಂಪೊಂದು ಊಟ ಮಾಡಿದೆ. ಬಳಿಕ ಮದ್ಯಪಾನವನ್ನೂ ಮಾಡಿದ್ದಾರೆ. ಊಟ ಮಾಡಿ ಹಲವು ಗಂಟೆಗಳಾದರೂ ಸ್ಥಳವನ್ನು ತೊರೆದಿರಲಿಲ್ಲ. ಬಾಗಿಲು ಮುಚ್ಚುವ ಸಮಯವಾಗಿದೆ ಎಂದು ಹೇಳದರೂ ಸ್ಥಳದಿಂದ ತೆರಳಿಲ್ಲ. ಅಲ್ಲದೆ, ಊಟದ ಬಿಲ್ ಕಟ್ಟಲು ನಿರಾಕರಿಸಿದ್ದಾರೆ. ಬಿಲ್ ಪಾವತಿಸಿ, ಸ್ಥಳ ತೊರೆಯುವಂತೆ ಡಾಬಾ ಸಿಬ್ಬಂದಿಗಳು ತಿಳಿಸಿದಾಗ ಕೋಪಗೊಂಡ ದುಷ್ಕರ್ಮಿಗಳು ಬೈಕ್ ನಲ್ಲಿ ಪೆಟ್ರೋಲ್ ತುಂಬಿ ಇರಿಸಿಕೊಂಡಿದ್ದ ಬಾಟಲಿಗಳನ್ನು ತಂಡು ಡಾಬಾ ಮೇಲೆ ಸುರಿದು ಬೆಂಕಿ ಹಚ್ಚಿದ್ದಾರೆ. ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಸ್ಥಳದಲ್ಲಿದ್ದ ಮನೋಜ್ ಗೂ ಬೆಂಕಿ ಹೊತ್ತಿಕೊಂಡಿದೆ.

ಬೆಂಕಿ ಹೊತ್ತಿಕೊಂಡ ಹಿನ್ನೆಲೆಯಲ್ಲಿ ಮನೋಜ್ ಕೂಗಾಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದಿರುವ ತೇಜಸ್ ಹಾಗೂ ಇತರೆ ಸಿಬ್ಬಂದಿ ಮನೋಜ್ ನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸದ್ದಾರೆ. ಬಳಿಕ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಸಂತ್ರಸ್ತ ವ್ಯಕ್ತಿ ನೀಡಿದ ಹೇಳಿಕೆ ಆಧರಿಸಿ ಪೊಲೀಸರು ಆರೋಪಿಗಳ ವಿರುದ್ಧ ಸೆಕ್ಷನ್ 436 (ಮನೆಯನ್ನು ನಾಶಪಡಿಸುವ ಉದ್ದೇಶದಿಂದ ಬೆಂಕಿ ಅಥವಾ ಸ್ಫೋಟಕ ವಸ್ತು ಬಳಕೆ) ಮತ್ತು 307 (ಕೊಲೆಯ ಪ್ರಯತ್ನ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮನೋಜ್ ಸಾವಿನ ಬಳಿಕ ಪೊಲೀಸರು ದುಷ್ಕರ್ಮಿಗಳ ವಿರುದ್ಧವೂ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.

SCROLL FOR NEXT