ರಾಜ್ಯ

ನೈಟ್ ಕರ್ಫ್ಯೂ: ಇಡೀ ಬೆಂಗಳೂರಲ್ಲಿ ಪೊಲೀಸರ ಕಣ್ಗಾವಲು

Srinivasamurthy VN

ಬೆಂಗಳೂರು: ಓಮಿಕ್ರಾನ್ ರೂಪಾಂತರಿ ಸೋಂಕು ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಹೇರಿರುವ ರಾತ್ರಿ ಕರ್ಫ್ಯೂ ನಿನ್ನೆ ರಾತ್ರಿಯಿಂದ ಆರಂಭವಾಗಿದ್ದು, ಮೊದಲ ದಿನವೇ ಸಿಲಿಕಾನ್ ಸಿಟಿ ಪೊಲೀಸರು ಇಡೀ ಬೆಂಗಳೂರು ನಗರವನ್ನು ಸಂಪೂರ್ಣ ಹಿಡಿತಕ್ಕೆ ತೆಗೆದುಕೊಂಡಿದ್ದರು.

ಹೌದು.. ಓಮಿಕ್ರಾನ್ ಭೀತಿಯ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಸೇರಿದಂತೆ ಕರ್ನಾಟಕದಾದ್ಯಂತ ಮಂಗಳವಾರ ರಾತ್ರಿ 10 ಗಂಟೆಯಿಂದ ರಾತ್ರಿ ಕರ್ಫ್ಯೂ ಆರಂಭವಾಗಿದೆ. ಕರ್ಫ್ಯೂ ಹಿನ್ನೆಲೆಯಲ್ಲಿ ಬೆಳಿಗ್ಗೆ 5 ಗಂಟೆಯವರೆಗೆ ಜನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. 2022ರ ಜನವರಿ 7ರವರೆಗೆ ನೈಟ್‌ ಕರ್ಫ್ಯೂ ಆದೇಶ ಜಾರಿಯಲ್ಲಿರುತ್ತದೆ. ಕರ್ಫ್ಯೂ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ನಗರಗಳಲ್ಲಿ ಪೊಲೀಸರು ನಾಕಾಬಂದಿ ಹಾಕಿ ವಾಹನಗಳ ತಪಾಸಣೆ ಆರಂಭಿಸಿದ್ದರು. ಅಗತ್ಯಸೇವೆಗಳನ್ನು ಹೊರತುಪಡಿಸಿ ಉಳಿದ ವಾಹನಗಳ ಅನಗತ್ಯ ಓಡಾಟಕ್ಕೆ ತಡೆಯೊಡ್ಡಲಾಗಿತ್ತು. ನೈಟ್ ​ಕರ್ಫ್ಯೂ ಹಿನ್ನೆಲೆ ಎಲ್ಲಾ ಅಂಗಡಿ ಮುಂಗಟ್ಟು ಬಂದ್‌ ಮಾಡಲಾಗಿತ್ತು.

ಈ ಹಿಂದೆ ನೈಟ್ ​ಕರ್ಫ್ಯೂ ಆದೇಶ ಉಲ್ಲಂಘಿಸಿ ಅನಗತ್ಯವಾಗಿ ಓಡಾಡಿದರೆ ಕಠಿಣ ಕ್ರಮ ಜರುಗಿಸುವುದಾಗಿ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಸಿದ್ದರು. ಹೀಗಾಗಿ ನಿನ್ನೆ ಮೊದಲ ದಿನವಾದ್ದರಿಂದ ಪೊಲೀಸರು ಕೊಂಚ ಹೆಚ್ಚಿನ ಸಂಖ್ಯೆಯಲ್ಲೇ ಕರ್ತವ್ಯಕ್ಕೆ ಹಾಜರಾಗಿ ಕಟ್ಟುನಿಟ್ಟಿನ ನಿಯಮ ಪಾಲನೆ ಮಾಡಿದರು. ನೈಟ್ ಕರ್ಫ್ಯೂ ಆದೇಶ ಜಾರಿಗೆ ಬಂದ ಹಿನ್ನೆಲೆಯಲ್ಲಿ ರಾತ್ರಿ 10 ಗಂಟೆಯ ನಂತರವೂ ತೆರೆದಿದ್ದ ಅಂಗಡಿ, ಮುಂಗಟ್ಟುಗಳನ್ನು ಪೊಲೀಸರು ಮುಚ್ಚಿಸಿದರು. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮೈಕ್​ಗಳಿದ್ದ ಪೊಲೀಸ್ ವಾಹನಗಳಲ್ಲಿ ಕರ್ಫ್ಯೂ ಆದೇಶವನ್ನು ಸಾರಿ ಹೇಳಲಾಯಿತು.

ರಾತ್ರಿ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆ ಪೊಲೀಸರು ಆಟೊಗಳ ಸಂಚಾರವನ್ನು ನಿರ್ಬಂಧಿಸಿದ್ದಾರೆ. ರಾಯಚೂರು ಸೇರಿದಂತೆ ಹಲವೆಡೆ ಆಟೊ ಚಾಲಕರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಘಟನೆಗಳು ವರದಿಯಾಗುತ್ತಿವೆ. ‘ರಾತ್ರಿ ವೇಳೆ ಪ್ರಯಾಣಿಕರು ಇರುತ್ತಾರೆ. ಆಟೊ ಸಂಚಾರಕ್ಕೆ ಅನುಮತಿ ಕೊಡಿ’ ಎಂಬ ಬೇಡಿಕೆಯನ್ನು ಪೊಲೀಸರು ತಳ್ಳಿಹಾಕಿದ್ದಾರೆ. ರಾಯಚೂರಿನ ಸದರ್ ಬಜಾರ್ ಪೊಲೀಸ್ ಠಾಣೆ ಎದುರು ಆಟೊ ಚಾಲಕರು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ:
ಇನ್ನು ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಆರಂಭವಾದ ನೈಟ್ ಕರ್ಫ್ಯೂ ಬಿಸಿ ನಾಗರೀಕರಿಗೆ ಮುಟ್ಟಿತ್ತು. ಗಂಟೆ ಸಮೀಪಿಸುತ್ತಿದ್ದಂತೆ, ನಾಗರಿಕರು ಮನೆಗೆ ತೆರಳಲು ಕೊನೆಯ ಸಾರಿಗೆ ಬಸ್ ಗಳನ್ನು ಹಿಡಿಯಲು ಆತುರಪಡುವುದು ಸಾಮಾನ್ಯ ದೃಶ್ಯವಾಗಿತ್ತು. ಕ್ಯಾಬ್ ಅಥವಾ ಆಟೋ ಹಿಡಿಯಲು ಜನರು ಪಬ್‌ಗಳು, ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳ ಹೊರಗೆ ಕಾಯುತ್ತಿದ್ದರು. ಆಸ್ಪತ್ರೆಗಳು ಮತ್ತು ಔಷಧಾಲಯಗಳು ತೆರೆದಿದ್ದವು, ಇತರ ಅಂಗಡಿಗಳು ರಾತ್ರಿ 9.30 ರ ಹೊತ್ತಿಗೆ ಮುಚ್ಚಲ್ಪಟ್ಟವು. ರಾತ್ರಿ 10.30 ರ ಹೊತ್ತಿಗೆ ನಗರವು ಸಂಪೂರ್ಣ ಸ್ತಬ್ಧವಾಯಿತು.

ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ನಗರ ನಿನ್ನೆ ರಾತ್ರಿ 10ರಬಳಿಕ ಸಂಪೂರ್ಣ ಸ್ತಬ್ಧವಾಗಿತ್ತು. ಇಡೀ ನಗರವನ್ನು ಪೊಲೀಸರು ತಮ್ಮ ಹಿಡಿತಕ್ಕೆ ಪಡೆದರು. ರಾತ್ರಿ 10ರ ಬಳಿಕವೂ ತೆರೆದಿದ್ದ ಅಂಗಡಿ ಮುಂಗಟ್ಟುಗಳನ್ನು ಪೊಲೀಸರು ಎಚ್ಚರಿಕೆ ನೀಡಿ ಮುಚ್ಚಿಸಿದರು. ಪೊಲೀಸರು ಮುಖ್ಯ ರಸ್ತೆಗಳು ಮತ್ತು ಪ್ರಮುಖ ಜಂಕ್ಷನ್‌ಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ತಪಾಸಣೆಗಾಗಿ ಪ್ರಯಾಣಿಕರನ್ನು ತಡೆದರು.

SCROLL FOR NEXT