ರಾಜ್ಯ

ಓಮಿಕ್ರಾನ್ ಡೇಂಜರ್ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ, ಆರೋಗ್ಯ ಮೂಲಸೌಕರ್ಯಕ್ಕೆ ಸರ್ಕಾರ ಕ್ರಮ: ಸಿಎಂ ಬೊಮ್ಮಾಯಿ

Sumana Upadhyaya

ಬೆಂಗಳೂರು: ಕೊರೋನಾ ಡೇಂಜರ್ ಜಿಲ್ಲೆಗಳಲ್ಲಿ ಕರ್ನಾಟಕ ಕೂಡ ಒಂದಾಗಿದ್ದು, ಕೇಂದ್ರ ಸರ್ಕಾರದ ಡೇಂಜರ್ ಪಟ್ಟಿಯಲ್ಲಿ ಕರ್ನಾಟಕ ಸೇರಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಮತ್ತು ಸರ್ಕಾರದ ಆಡಳಿತಕ್ಕೆ ಚುರುಕು ಮುಟ್ಟಿಸಲು ಜಿಲ್ಲಾಧಿಕಾರಿಗಳ ಸಭೆಯನ್ನು ಕರೆಯಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದ ಜನತೆಗೆ ಹೊಸವರ್ಷ 2022ರ ಶುಭಾಶಯಗಳು, ಕರ್ನಾಟಕ ಎಲ್ಲಾ ಸವಾಲುಗಳಿಂದ ಮುಕ್ತವಾಗಿ ಜನಸಾಮಾನ್ಯರ ಬದುಕು ಉತ್ತಮಗೊಳ್ಳಲಿ, ಹಸನಾಗಲಿ, ಹೊಸ ವರ್ಷ ಎಲ್ಲರಿಗೂ ಹರುಷ ತರಲಿ ಎಂದು ಆಶಿಸಿದರು.

ಇವತ್ತು ಜಿಲ್ಲಾಧಿಕಾರಿಗಳ ಸಭೆಯನ್ನು ಕರೆದಿದ್ದು,ಜಿಲ್ಲಾಮಟ್ಟದ ಹಲವಾರು ಆಡಳಿತಾತ್ಮಕ ವಿಚಾರಗಳು ಮತ್ತು ಅನುಷ್ಠಾನಗಳ ಬಗ್ಗೆ ಚರ್ಚೆ ಮಾಡಿ ಮಹತ್ವದ ತೀರ್ಮಾನಗಳನ್ನು 2022ರಲ್ಲಿ ಹೊಸ ಚೈತನ್ಯ ಮತ್ತು ಹೊಸ ದಿಕ್ಸೂಚಿಯಡಿಯಲ್ಲಿ ಆಡಳಿತವನ್ನು ಇನ್ನಷ್ಟು ಜನರ ಹತ್ತಿರ ತೆಗೆದುಕೊಂಡು ಹೋಗಲು ತೀರ್ಮಾನ ಮಾಡಿದ್ದೇವೆ ಎಂದರು.

ಡೇಂಜರ್ ಪಟ್ಟಿಯಲ್ಲಿ ಕರ್ನಾಟಕ: ಇಡೀ ದೇಶದಲ್ಲಿ ಓಮಿಕ್ರಾನ್ ಸೋಂಕು ಜಾಸ್ತಿಯಾಗುತ್ತಿದೆ. ಅಪಾಯಕಾರಿ ಎಂಟು ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಕೂಡ ಒಂದು ಎಂದು ಕೇಂದ್ರ ಸರ್ಕಾರ ಗುರುತಿಸಿದೆ. ಹೀಗಾಗಿ ನಾವು ಕೆಲವು ಕಟ್ಟೆಚ್ಚರ ವಹಿಸಿದ್ದೇವೆ. ಮುಂದಿನ ದಿನಗಳಲ್ಲಿ ಸೋಂಕು ಯಾವ ಕಡೆಗೆ ಸಾಗುತ್ತದೆ, ನಮ್ಮ ರಾಜ್ಯದ ಆರೋಗ್ಯ ಮೂಲಸೌಕರ್ಯಗಳು ಹೇಗಿವೆ ಎಂದು ನೋಡಿಕೊಂಡು ಕ್ರಮ ತೆಗೆದುಕೊಳ್ಳುವ ಅವಶ್ಯಕತೆಯಿದೆ ಎಂದರು. 

ಕರ್ನಾಟಕದಲ್ಲಿ ಮುಂಜಾಗ್ರತಾ ಕ್ರಮ ತೆಗದುಕೊಳ್ಳಲಾಗಿದೆ, ಆಕ್ಸಿಜನ್​, ಬೆಡ್​, ಆರೋಗ್ಯ ಸೌಕರ್ಯಗಳ ಹೆಚ್ಚಳ ಮಾಡಲಾಗಿದೆ ಎಂದು  ಬೆಂಗಳೂರಿನಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ದೇವಸ್ಥಾನಗಳ ಹಸ್ತಾಂತರಕ್ಕೆ ಸಂಬಂಧಪಟ್ಟಂತೆ ಡಿ ಕೆ ಶಿವಕುಮಾರ್ ಟೀಕೆಗೆ ಉತ್ತರಿಸಿ, ಡಿಕೆಶಿಗೆ ಬೆಕ್ಕಿನ ಕನಸಲ್ಲಿ ಇಲಿ ಎಂಬಂತಾಗಿದೆ. ನಾವು ದೇವಸ್ಥಾನಗಳನ್ನು ಯಾರಿಗೂ ಹಸ್ತಾಂತರ ಮಾಡುತ್ತಿಲ್ಲ. ದೇವಸ್ಥಾನಗಳನ್ನು ಸರ್ಕಾರದ ಕಟ್ಟುಪಾಡುಗಳಿಂದ ಮುಕ್ತ ಮಾಡುತ್ತೇವೆ. ಡಿಕೆಶಿ ಅವರ ಅಭಿಪ್ರಾಯ ಹಿಂದೂ ದೇವಸ್ಥಾನಗಳ ವಿರುದ್ಧ ಮತ್ತು ಹಿಂದೂ ಭಕ್ತರ ವಿರುದ್ಧ ಅವರ ಅಭಿಪ್ರಾಯ, ಮನೋಭಾವ ಇರುವುದು ಸ್ಪಷ್ಟವಾಗಿದೆ ಅಂತಾ ತಿರುಗೇಟು ಕೊಟ್ಟರು. 

SCROLL FOR NEXT