ರಾಜ್ಯ

ಸಾರ್ವಜನಿಕರು ಮೋಸ ಹೋಗಬಾರದೆಂಬ ಹಿತದೃಷ್ಟಿಯಿಂದ, ನನ್ನ ವ್ಯಕ್ತಿತ್ವ ರಕ್ಷಣೆಗಾಗಿ ಸಚಿವರ ಆಪ್ತನ ವಿರುದ್ಧ ದೂರು: ಬಿ.ವೈ. ವಿಜಯೇಂದ್ರ

Sumana Upadhyaya

ಬೆಂಗಳೂರು: ಸಮಾಜ ಕಲ್ಯಾಣ ಖಾತೆ ಸಚಿವ ಬಿ ಶ್ರೀರಾಮುಲು ಅವರ ಆಪ್ತ ಸಹಾಯಕ ರಾಜು ಅಲಿಯಾಸ್ ರಾಜಣ್ಣ(39ವ)ನನ್ನು ಸಿಸಿಬಿ ಪೊಲೀಸರು ಸಾರ್ವಜನಿಕರಿಗೆ ವಂಚನೆ ಆರೋಪದ ಮೇಲೆ ಬಂಧಿಸಿದ್ದಾರೆ, ಅವರ ವಿರುದ್ಧ ಎಫ್ ಐಆರ್ ಕೂಡ ದಾಖಲಾಗಿದ್ದು, ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ.

ಪ್ರಕರಣ ತಮ್ಮ ಗಮನಕ್ಕೆ ಬಂದಿರಲಿಲ್ಲ, ವಿಜಯೇಂದ್ರ ಅವರು ದೂರು ನೀಡುವ ಮುನ್ನ ತಮ್ಮ ಗಮನಕ್ಕೆ ಈ ವಿಚಾರವನ್ನು ತಂದಿರಲಿಲ್ಲ ಎಂದು ಈಗಾಗಲೇ ಸಚಿವ ಶ್ರೀರಾಮುಲು ಅಸಮಾಧಾನ ಹೊರಹಾಕಿದ್ದಾರೆ.

ತಮ್ಮ ಮತ್ತು ಸಚಿವರ ಹೆಸರು ಹೇಳಿಕೊಂಡು ರಾಜಣ್ಣ ಹಲವಾರು ಮಂದಿಗೆ ವಂಚನೆ ಎಸಗಿದ್ದಾರೆ ಎಂದು ದೂರು ನೀಡಿದ್ದು ಸ್ವತಃ ಸಿಎಂ ಪುತ್ರ ವಿಜಯೇಂದ್ರ. ತಾವು ನೀಡಿರುವ ದೂರಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ, ಸಾರ್ವಜನಿಕ ಕ್ಷೇತ್ರದಲ್ಲಿರುವವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಜನರಿಗೆ ವಂಚಿಸಬಾರದು ಎಂಬ ದೃಷ್ಟಿಯಿಂದಲೇ ದೂರು ನೀಡಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಅಧಿಕಾರದಲ್ಲಿರುವ ಸಾರ್ವಜನಿಕ ವ್ಯಕ್ತಿಗಳ ಹೆಸರು ಹೇಳಿಕೊಂಡು ವಂಚನೆ ಎಸಗುವವರಿಂದ ನಮಗೆ ತೊಂದರೆಯೇ, ಇದು ವಿರೋಧಿಗಳಿಗೆ ಅಪಪ್ರಚಾರ ನಡೆಸಲು ಪ್ರಮುಖ ಅಸ್ತ್ರವಾಗಬಹುದು, ಹೀಗಾಗಿ ಎಚ್ಚರ ತಪ್ಪಬಾರದು ಎಂದು ದೂರು ಕೊಟ್ಟಿದ್ದೇನೆ, ಇಂತಹ ಘಟನೆ ಮರುಕಳಿಸಬಾರದು ಎಂದಿದ್ದಾರೆ.

SCROLL FOR NEXT