ರಾಜ್ಯ

ಬಂಧನವಾದ 24 ಗಂಟೆಯೊಳಗೆ ಸಚಿವ ಶ್ರೀರಾಮುಲು ಆಪ್ತ ಸಹಾಯಕ ಬಿಡುಗಡೆ!

Sumana Upadhyaya

ಬೆಂಗಳೂರು: ಸಚಿವರು ಮತ್ತು ಸಿಎಂ ಪುತ್ರ ಬಿ ವೈ ವಿಜಯೇಂದ್ರ ಅವರ ಹೆಸರು ಹೇಳಿಕೊಂಡು ಸಾರ್ವಜನಿಕರಿಗೆ ವಂಚಿಸುತ್ತಿದ್ದ ಆರೋಪದ ಮೇಲೆ ಬಂಧಿತರಾಗಿದ್ದ ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ ಶ್ರೀರಾಮುಲು ಅವರ ಆಪ್ತ ಸಹಾಯಕ ರಾಜಣ್ಣನನ್ನು ಸಿಸಿಬಿ ಪೊಲೀಸರು ಶುಕ್ರವಾರ ಮಧ್ಯಾಹ್ನ ಬಿಡುಗಡೆ ಮಾಡಿದ್ದಾರೆ.

ನಿನ್ನೆ ರಾತ್ರಿ ಸಚಿವ ಶ್ರೀರಾಮುಲು ಅವರ ಕ್ವಾರ್ಟರ್ಸ್ಗೆ ಪ್ರವೇಶಿಸಿದ್ದ ಸಿಸಿಬಿ ಪೊಲೀಸರು ರಾಜಣ್ಣನನ್ನು ವಶಕ್ಕೆ ಪಡೆದಿದ್ದರು. ನಂತರ ಇಂದು ಬೆಂಗಳೂರಿನ ಆಡುಗೋಡಿಯಲ್ಲಿರುವ ಟೆಕ್ನಿಕಲ್ ಸೆಲ್ ನಲ್ಲಿ ವಿಚಾರಣೆ ನಡೆಸಿ ಅವರ ಧ್ವನಿ ಸ್ಯಾಂಪಲ್ ನ್ನು ಪಡೆದುಕೊಂಡು ಮುಂದಿನ ದಿನಗಳಲ್ಲಿ ವಿಚಾರಣೆಗೆ ಕರೆದಾಗಲೆಲ್ಲಾ ಹಾಜರಾಗುವಂತೆ ಷರತ್ತು ವಿಧಿಸಿ ಬಿಡುಗಡೆ ಮಾಡಿದ್ದಾರೆ. ರಾಜಣ್ಣ ಮಾತನಾಡಿರುವ ಮೂರು ಆಡಿಯೊ ಈಗ ಸಿಸಿಬಿ ವಶದಲ್ಲಿದೆ.

ರಾಜಣ್ಣ ಬಿಡುಗಡೆ ಹಿಂದೆ ನಾಯಕರ ಒತ್ತಡ ಕೆಲಸ ಮಾಡಿತೇ, ಪೊಲೀಸರ ಮೇಲೆ ನಾಯಕರು ತೀವ್ರ ಒತ್ತಡ ಹಾಕಿದರೇ ಎಂಬ ಮಾತುಗಳು ಕೇಳಿಬರುತ್ತಿವೆ.

ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಕಾಂಗ್ರೆಸ್, ವಂಚನೆ ಪ್ರಕರಣದಲ್ಲಿ ಆಪ್ತನನ್ನು ರಕ್ಷಿಸುವ ಮೂಲಕ ಪರೋಕ್ಷವಾಗಿ ಭ್ರಷ್ಟಾಚಾರ, ವಂಚನೆಗೆ ಸಚಿವರುಗಳು ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಆರೋಪಿಸಿದೆ. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಸಚಿವ ಶ್ರೀರಾಮುಲು ಅವರು ಆಪ್ತನ ಮೂಲಕ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಸ್ಪಷ್ಟವಾಗಿ ಗೋಚರವಾಗುತ್ತಿದೆ ಎಂದು ಟೀಕಿಸಿದ್ದಾರೆ. 

SCROLL FOR NEXT