ರಾಜ್ಯ

ನಾಳೆಯಿಂದ ನಾಡದೇವತೆ ಚಾಮುಂಡಿ ಬೆಟ್ಟ ದರ್ಶನಕ್ಕೆ ಭಕ್ತರಿಗೆ ಅವಕಾಶ: ಪೂಜಾ ಕೈಂಕರ್ಯಕ್ಕಿಲ್ಲ ಅನುಮತಿ 

Sumana Upadhyaya

ಮೈಸೂರು: ಕೊರೋನಾ ಎರಡನೇ ಅಲೆಯ ತೀವ್ರತೆ ಕಡಿಮೆಯಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅನ್ ಲಾಕ್ 3.0ಗೆ ಸಿದ್ದತೆ ನಡೆಯುತ್ತಿದೆ. ನಾಳೆಯಿಂದ ರಾಜ್ಯಾದ್ಯಂತ ಬಹುತೇಕ ಚಟುವಟಿಕೆಗಳು ಆರಂಭವಾಗುತ್ತಿವೆ.

ಸುಮಾರು ಎರಡು ತಿಂಗಳಿನಿಂದ ಬಂದ್ ಆಗಿದ್ದ ದೇಗುಲಗಳು ನಾಳೆ ಮುಂಜಾನೆ ಭಕ್ತರ ದರ್ಶನಕ್ಕೆ ತೆರೆಯಲಿದೆ. ಸರ್ಕಾರ ಭಕ್ತರಿಗೆ ದೇಗುಲ ದರ್ಶನಕ್ಕೆ ಮಾತ್ರ ಅವಕಾಶ ನೀಡಿದ್ದು, ಪೂಜೆಗೆ ಅನುಮತಿಯಿಲ್ಲ.

ಇನ್ನೇನು ಆಷಾಢ ಮಾಸ ಆರಂಭವಾಗುತ್ತಿದೆ, ಮೈಸೂರಿನ ನಾಡದೇವತೆ ಚಾಮುಂಡಿ ಬೆಟ್ಟಕ್ಕೆ ಆಷಾಢ ಮಾಸದಲ್ಲಿ ದರ್ಶನ ನೀಡುವವರ ಸಂಖ್ಯೆ ಹೆಚ್ಚು. ಹಾಗಾಗಿ ಇನ್ನು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವವರಿಗೆ ಸಮಸ್ಯೆಯಿಲ್ಲ.

ಕೋವಿಡ್ ನಿರ್ಬಂಧ ಕಾರಣದಿಂದ ಎರಡು ತಿಂಗಳಿನಿಂದ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರಾಕರಿಸಿದ್ದರೂ ಕೂಡ ಧಾರ್ಮಿಕ ವಿಧಿ ವಿಧಾನದಂತೆ ನಿತ್ಯ ಪೂಜಾ ಕೈಂಕರ್ಯಗಳು ನೆರವೇರುತ್ತಿದ್ದವು. ಪೂಜಾರಿಗಳು ಬಂದು ಪೂಜೆ ಮಾಡಿ ಹೋಗುತ್ತಿದ್ದರು. ನಾಳೆಯಿಂದ ಭಕ್ತರು ಕೋವಿಡ್ ನಿಯಮಗಳನ್ನು ಪಾಲಿಸಿ ದರ್ಶನ ಮಾಡಬೇಕೆಂದು ನಿಯಮ ಹೊರಡಿಸಲಾಗಿದೆ.

ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು ಸ್ಯಾನಿಟೈಸರ್ ಬಳಸಿ, ಮಾಸ್ಕ್ ಧರಿಸಿಕೊಂಡು ಚಾಮುಂಡಿ ಬೆಟ್ಟಕ್ಕೆ ಹತ್ತಿ ದೇವಿಯ ದರ್ಶನ ಪಡೆಯಬೇಕೆಂದು ದೇವಾಲಯದ ಹೊರಗೆ ಸೂಚನಾ ಫಲಕ ಹಾಕಲಾಗಿದೆ. ನಾಳೆಯಿಂದ ಯಾವ ಹೊತ್ತಿನಲ್ಲಿ ಭಕ್ತರು ದೇವಿಯ ದರ್ಶನ ಪಡೆಯಬಹುದು ಎಂದು ಅಪರಾಹ್ನ ಸೂಚನೆ ಹೊರಡಿಸಲಾಗುವುದು ಎಂದು ದೇವಸ್ಥಾನದ ಪ್ರಧಾನ ಅರ್ಚಕ ಡಾ ಶಶಿಶೇಖರ್ ದೀಕ್ಷಿತ್ ತಿಳಿಸಿದ್ದಾರೆ.
 

SCROLL FOR NEXT