ರಾಜ್ಯ

ಎಂಎಸ್‌ಎಂಇಗಳಿಗೆ ಕೆಐಎಡಿಬಿ ಯಲ್ಲಿ ಶೇ 30ರಷ್ಟು ಭೂಮಿ ಮೀಸಲು: ಜಗದೀಶ್‌ ಶೆಟ್ಟರ್‌

Srinivasamurthy VN

ಬೆಂಗಳೂರು: ರಾಜ್ಯದಲ್ಲಿ ಎಂಎಸ್‌ಎಂಇ ಗಳ ಪ್ರೋತ್ಸಾಹಕ್ಕಾಗಿ ಕೆಐಎಡಿಬಿ ವತಿಯಿಂದ ಅಭಿವೃದ್ದಿಪಡಿಸಲಾಗುತ್ತಿರುವ ಕೈಗಾರಿಕಾ ಪ್ರದೇಶಗಳಲ್ಲಿ ಶೇ 30ರಷ್ಟು ಭೂಮಿಯನ್ನು ಮೀಸಲಿಡಲಾಗುತ್ತಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ತಿಳಿಸಿದ್ದಾರೆ.

ಇಂದು ಕ್ರೆಡೈ ಕರ್ನಾಟಕದ ವತಿಯಿಂದ ಆಯೋಜಿಸಲಾಗಿದ್ದ ಕ್ರೆಡೈ ಜ್ಞಾನ ಸರಣಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ರಾಜ್ಯದ ಆರ್ಥಿಕ ಅಭಿವೃದ್ದಿಯಲ್ಲಿ ಸಣ್ಣ ಕೈಗಾರಿಕೆಗಳ ಮಹತ್ವನ್ನು ಸರ್ಕಾರ ಅರಿತಿದೆ. ಈ ಹಿನ್ನೆಲೆಯಲ್ಲಿ ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ  ಹಲವಾರು ಯೋಜನೆಗಳನ್ನು ಘೋಷಿಸಲಾಗಿದೆ ಎಂದರು.

ನೂತನ ಕೈಗಾರಿಕಾ ನೀತಿಯಲ್ಲಿ ಕರ್ನಾಟಕ ಕ್ಲಸ್ಟರ್‌ ಡೆವಲಪ್‌ಮೆಂಟ್‌ ಯೋಜನೆಯನ್ನು ಅಳವಡಿಸಿಕೊಳ್ಳಲಾಗಿದೆ. ಈ ಮೂಲಕ ಎಂಎಸ್‌ಎಂಇ ಗಳು ತಮ್ಮ ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ  ವತಿಯಿಂದ ಅಭಿವೃದ್ದಿಪಡಿಸಲಾಗುವ ಕೈಗಾರಿಕಾ ಪ್ರದೇಶಗಳಲ್ಲಿ ಶೇ.30 ಭೂಮಿಯನ್ನು ಸಣ್ಣ ಕೈಗಾರಿಕೆಗಳಿಗೆ ಮೀಸಲು ಇಡಲಾಗಿದೆ ಎಂದು ಹೇಳಿದರು.

ರಿಯಲ್‌ ಎಸ್ಟೇಲ್‌ ಕ್ಷೇತ್ರವೂ ಕೂಡಾ ಉತ್ತಮ ಉದ್ಯೋಗಾವಕಾಶ ಒದಗಿಸುವ ಕ್ಷೇತ್ರವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರ ಈ ಕ್ಷೇತ್ರದ ಅಭಿವೃದ್ದಿಗೂ ಸಾಕಷ್ಟು ಒತ್ತು ನೀಡುತ್ತಿದೆ. ಕ್ರೆಡೈ ಸಂಸ್ಥೆಯ ಮೂಲಕ ಬಹಳಷ್ಟು ಒಳ್ಳೆಯ ಕೆಲಸಗಳಾಗುತ್ತಿವೆ ಎಂದು ಹೇಳಿದರು.

ವೆಬಿನಾರ್‌ ನಲ್ಲಿ ಕ್ರೆಡೈ ನ್ಯಾಷನಲ್‌ ಉಪಾಧ್ಯಕ್ಷರು ಮತ್ತು ಎಂಎಸ್‌ಎಂಇ ಸಮಿತಿಯ ಉಸ್ತುವಾರಿ ಜಿ ರಾಮ್‌ ರೆಡ್ಡಿ, ಎಂಎಸ್‌ಎಂಇ ಸಮಿತಿಯ ಅಧ್ಯಕ್ಷರಾದ ಆನಂದ್‌ ಸಿಂಗಾನಿಯಾ, ಸಹ ಅಧ್ಯಕ್ಷರಾದ ಟಮಲ್‌ ಘೋಷ್‌, ಕ್ರೆಡೈ ಕರ್ನಾಟಕದ ಚೈತನ್ಯ ಕುಲಕರ್ಣಿ, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ರೇವಣ್ಣ ಗೌಡ ಪಾಲ್ಗೊಂಡಿದ್ದರು.

SCROLL FOR NEXT