ರಾಜ್ಯ

ಸಿಲಿಂಡರ್ ಸ್ಫೋಟದಲ್ಲಿ ಯುವಕ ಸಾವು: ಹುಟ್ಟುಹಬ್ಬ ಸಮಾರಂಭಕ್ಕೆ ಬಲೂನ್ ಸರಬರಾಜು ಮಾಡಿದ್ದ ಸಂಸ್ಥೆ ವಿರುದ್ಧ ಪ್ರಕರಣ ದಾಖಲು!

Srinivasamurthy VN

ಬೆಂಗಳೂರು: ಹುಟ್ಟುಹಬ್ಬದ ಸಮಾರಂಭದ ವೇಳೆ ಸಿಲಿಂಡರ್ ಸ್ಫೋಟವಾಗಿ ವ್ಯಕ್ತಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಮಾರಂಭಕ್ಕೆ ಬಲೂನು ಸರಬರಾಜು ಮಾಡಿದ್ದ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹುಟ್ಟುಹಬ್ಬ ಸಮಾರಂಭದ ಅಲಂಕಾರಕ್ಕಾಗಿ ಬಲೂನ್‌ಗಳಿಗೆ ಗ್ಯಾಸ್ ತುಂಬಿಸುತ್ತಿದ್ದ ವೇಳೆ ಹೀಲಿಯಂ ಸಿಲಿಂಡರ್‌ ಸ್ಫೋಟಗೊಂಡು, ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಅಶೋಕನಗರ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿತ್ತು. ಈ ದುರ್ಘಟನೆಯಲ್ಲಿ ತಮಿಳುನಾಡಿನ ದಿನೇಶ್ ಮೃತಪಟ್ಟಿದ್ದರು. ಇದೀಗ ಈ  ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರ್ಟಿ ಆಯೋಜನೆ ಹೊಣೆ ಹೊತ್ತಿದ್ದ ಪಾರ್ಟಿ.ಕಾಮ್ ಸಂಸ್ಥೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಂಸ್ಥೆಯು ತನ್ನ ಸಿಬ್ಬಂದಿಗಳಿಗೆ ಯಾವುದೇ ರೀತಿಯ ಸುರಕ್ಷತಾ ಪರಿಕರಗಳನ್ನು ನೀಡದ ಕಾರಣ ಪೊಲೀಸರು ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತ ಸಿಬ್ಬಂದಿಯನ್ನು ತಮಿಳುನಾಡು ಮೂಲದ ದಿನೇಶ್ ಎಂದು ಗುರುತಿಸಲಾಗಿದ್ದು, ಆತ ಪರಪ್ಪನ ಅಗ್ರಹಾರದ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ. 

ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಲ್ಯಾಂಗ್ ಫೋರ್ಡ್ ರಸ್ತೆಯ ಅಪಾರ್ಟ್ಮೆಂಟ್ನಲ್ಲಿ ಸಂಜೆ 7.45 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಇಲ್ಲಿನ ನಿವಾಸಿಗಳಲ್ಲಿ ಒಬ್ಬರು ತಮ್ಮ ಸ್ನೇಹಿತನ ಜನ್ಮದಿನವನ್ನು ಆಚರಿಸುವ ಸಲುವಾಗಿ ಪಾರ್ಟಿ.ಕಾಂನಲ್ಲಿ ಅವರು ಬಲೂನ್ ಗಳನ್ನು ಮತ್ತು  ಆಕಾಶ ಬುಟ್ಟಿಗಳನ್ನು ಆರ್ಡರ್ ಮಾಡಿದ್ದರು.ಇದಕ್ಕಾಗಿ ಪಾರ್ಟ್.ಕಾಮ್ ನ ಸಿಬ್ಬಂದಿ ದಿನೇಶ್ ಮತ್ತು ಅವರ ಸಹಾಯಕ ಮಹಾದೇವ್ 200 ಬಲೂನ್ ಗಳನ್ನು ಅಲಂಕರಿಸಲು ಬಂದರು. ತಮ್ಮ ಬೈಕ್ ನಲ್ಲಿ ಹೀಲಿಯಂ ಸಿಲಿಂಡರ್ ತಂದಿದ್ದರು. ದಿನೇಶ್ ಪ್ರವೇಶದ್ವಾರದ ಬಳಿ ಬಲೂನ್ ಗಳಿಗೆ ಹೀಲಿಯಂ ಗ್ಯಾಸ್ ತುಂಬಿಸುತ್ತಿದ್ದರು, ಈ ವೇಳೆ ಅದು ಸ್ಫೋಟಗೊಂಡಾಗ ದಿನೇಶ್ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರೆ, ಮಹಾದೇವ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಹೇಳಿದ್ದಾರೆ.

ಇನ್ನು ಬಲೂನ್ ಗಳಿಗೆ ಸಿಬ್ಬಂದಿಗಳು ವೈಜ್ಞಾನಿಕ ವಿಧಾನಗಳನ್ನು ಅನುಸರಿಸುತ್ತಿರಲಿಲ್ಲ, ಸೂಕ್ತ ಮುಂಜಾಗ್ರತೆ ತೆಗೆದುಕೊಳ್ಳದೆ ಇದ್ದುದರಿಂದ ದುರಂತ ಸಂಭವಿಸಿದೆ. ಈ ಸಂಬಂಧ ತನಿಖೆ ನಡೆಯುತ್ತಿದ್ದು, ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು. ಮರಣೋತ್ತರ ಪರೀಕ್ಷೆಯ ನಂತರ ಭಾನುವಾರ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು, ಸೋಮವಾರ ಕಂಪನಿಗೆ ನೋಟಿಸ್ ನೀಡಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

SCROLL FOR NEXT