ರಾಜ್ಯ

ಕಾರು ಅಪಘಾತದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಪುತ್ರ ಚಿದಾನಂದ್ ಸವದಿಗೆ ಕ್ಲೀನ್ ಚಿಟ್: ಬಾಗಲಕೋಟೆ ಎಸ್ಪಿ

Sumana Upadhyaya

ಬಾಗಲಕೋಟೆ: ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಯವರ ಹಿರಿಯ ಪುತ್ರನ ಕಾರು ಬೈಕ್ ಗೆ ಡಿಕ್ಕಿ ಹೊಡೆದು 58 ವರ್ಷದ ರೈತ ಮೃತಪಟ್ಟ ಘಟನೆಗೆ ಸಂಬಂಧಪಟ್ಟಂತೆ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ಕ್ಲೀನ್ ಚಿಟ್ ನೀಡಿದ್ದಾರೆ.

ಅಪಘಾತವಾಗುವ ವೇಳೆ ಚಿದಾನಂದ ಸವದಿ ಚಾಲಕ ಸೀಟಿನಲ್ಲಿ ಕುಳಿತಿರಲಿಲ್ಲ, ಅವರ ಚಾಲಕ ಹನುಮಂತಸಿಂಗ್ ರಜಪೂತ್ ಚಾಲನೆ ಮಾಡುತ್ತಿದ್ದರು. ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಐಪಿಸಿ ಸೆಕ್ಷನ್ 304ರಡಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮೃತ ರೈತನ ಕುಟುಂಬಸ್ಥರು, ಅವರ ಸ್ನೇಹಿತರು ಆರೋಪಿಸುವಂತೆ ಚಿದಾನಂದ ಸವದಿಯವರೇ ವಾಹನ ಚಾಲನೆ ಮಾಡುತ್ತಿದ್ದರು ಎಂಬುದಕ್ಕೆ ಸಾಕ್ಷ್ಯಾಧಾರಗಳಿದ್ದರೆ ಅದನ್ನು ಪೊಲೀಸರಿಗೆ ನೀಡಬಹುದು. ಅದನ್ನೂ ಪರಿಗಣಿಸಿ ತನಿಖೆ ನಡೆಸಲಾಗುವುದು, ಉಳಿದಂತೆ ತನಿಖೆ ಮುಂದುವರಿದಿದೆ ಎಂದು ಸ್ಪಷ್ಟಪಡಿಸಿದರು.

ನನ್ನ ಮಗ ಚಾಲಕ ಸೀಟಿನಲ್ಲಿರಲಿಲ್ಲ, ಡಿಸಿಎಂ ಲಕ್ಷ್ಮಣ ಸವದಿ: ಇನ್ನು ತಮ್ಮ ಮಗನ ಕಾರು ಅಪಘಾತದ ಕುರಿತಂತೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ನನ್ನ ಮಗ ಆತನ ಸ್ನೇಹಿತರೊಂದಿಗೆ ಹಲವು ದಿನಗಳಿಂದ ಕಿಟ್ ಹಂಚಿಕೆ ಮಾಡುತ್ತಿದ್ದ. ಹೀಗಾಗಿ ಕೊಪ್ಪಳದ ಆಂಜನೇಯ ದೇಗುಲಕ್ಕೆ ತೆರಳಿದ್ದರು. ವಾಪಸಾಗುವಾಗ ಚಿದಾನಂದ ಮುಂದಿನ ಗಾಡಿಯಲ್ಲಿದ್ದ. ಆತ ಇದ್ದ ಕಾರು ಅಪಘಾತವಾಗಿಲ್ಲ ಎಂದು ಹೇಳಿದ್ದಾರೆ.

ಮಂತ್ರಿಗಳ ಮಗ ಎಂದ ಮೇಲೆ ಹಲವು ವದಂತಿಗಳು ಹಬ್ಬುವುದು ಸಾಮಾನ್ಯ, ಅಪಘಾತದ ಬಳಿಕ ಚಿದಾನಂದನೇ ಆಸ್ಪತ್ರೆಗೆ ಸೇರಿಸಿದ್ದು. ನಾವು ಸುಳ್ಳು ಯಾಕೆ ಹೇಳಬೇಕು, ನನ್ನ ಮಗ ಡ್ರೈವಿಂಗ್ ಮಾಡಲ್ಲ. ಚಾಲಕ ಹನುಮಂತ ಕಾರು ಚಲಾಯಿಸುತ್ತಾನೆ ಎಂದು ಹೇಳಿದರು.

ಮೃತನ ಕುಟುಂಬಸ್ಥರ ಜೊತೆ ನಾವಿದ್ದೇವೆ. ನಾಳೆ ನಾನೇ ಖುದ್ದಾಗಿ ಅವರ ಕುಟುಂಬಸ್ಥರನ್ನು ಭೇಟಿಯಾಗುತ್ತೇನೆ ಎಂದರು.

ಏನಿದು ಪ್ರಕರಣ?: ನಿನ್ನೆ ಸಾಯಂಕಾಲ ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣ ಹತ್ತಿರ ಕೂಡಲಸಂಗಮ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಈ ಅಪಘಾತ ನಡೆದಿತ್ತು. ಡಿಸಿಎಂ ಸವದಿಯವರ ಹಿರಿಯ ಮಗ ಚಿದಾನಂದ ಸವದಿ ಮತ್ತು ಅವರ ಸ್ನೇಹಿತರು ಇತರ ಹನ್ನೊಂದು ಮಂದಿ ಎರಡು ಕಾರುಗಳಲ್ಲಿ ವಿಜಯಪುರ ಮೂಲಕ ಅಥಣಿಗೆ ಹಿಂದಿರುಗುತ್ತಿದ್ದರು. ಈ ವೇಳೆ ಮೃತ ರೈತ ತಮ್ಮ ಕೃಷಿ ಭೂಮಿಯಿಂದ ದ್ವಿಚಕ್ರ ವಾಹನದಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ವೇಗವಾಗಿ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಾಗ ಈ ಅಪಘಾತ ಸಂಭವಿಸಿದೆ.

ತಲೆಗೆ ತೀವ್ರವಾಗಿ ಪೆಟ್ಟು ಬಿದ್ದ ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ದಾಖಲಾದ ಒಂದೇ ಗಂಟೆಯಲ್ಲಿ ಮೃತರಾದರು.

ಕುಟುಂಬಸ್ಥರ ಆರೋಪ: ಡಿಸಿಎಂ ಮಗ ಚಿದಾನಂದ್ ಬದಲಿಗೆ ಚಾಲಕ ಹನುಮಂತ್ ಸಿಂಗ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಪಘಾತದ ಬಗ್ಗೆ ಯಾವುದೇ ವಿಚಾರಣೆಯಿಲ್ಲದೆ ಡಿಸಿಎಂ ಪುತ್ರನಿಗೆ ಕ್ಲೀನ್ ಚಿಟ್ ನೀಡಲಾಗಿದೆ. ಚಿದಾನಂದ್ ತನ್ನ ವಾಹನದ ನಂಬರ್ ಪ್ಲೇಟ್ ಹಾನಿಗೊಳಿಸಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದರು ಎಂದು ಆರೋಪಿಸಿದ್ದಾರೆ.

ನಾನು ಚಲಾಯಿಸುತ್ತಿರಲಿಲ್ಲ: ಬೈಕ್ ಸವಾರನನ್ನು ಹೊಡೆದ ಕಾರು ನನಗೆ ಸೇರಿದ್ದು ಹೌದು, ಆದರೆ ಅದನ್ನು ನಾನು ಓಡಿಸುತ್ತಿರಲಿಲ್ಲ. ನನ್ನ ಕಾರಿನಿಂದ 30 ಕಿ.ಮೀ ದೂರದಲ್ಲಿರುವ ಮತ್ತೊಂದು ಕಾರಿನಲ್ಲಿ ನಾನು ನನ್ನ ಸ್ನೇಹಿತರೊಂದಿಗೆ ಇದ್ದೆ.

ಘಟನೆಯ ಬಗ್ಗೆ ನನಗೆ ಎಚ್ಚರಿಕೆ ಬಂದ ಕೂಡಲೇ ನಾನು ಸ್ಥಳಕ್ಕೆ ಧಾವಿಸಿ ಗಾಯಗೊಂಡಿದ್ದ ರೈತನನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಸಹಾಯ ಮಾಡಿದೆ. ನಾನು ಯಾವುದೇ ವ್ಯಕ್ತಿಗೆ ಬೆದರಿಕೆ ಹಾಕಿಲ್ಲ ಅಥವಾ ಅಪಘಾತದ ಸ್ಥಳದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿಲ್ಲ. ಮಾನವೀಯ ಆಧಾರದ ಮೇಲೆ ನಾನು ಮೃತ ರೈತನ ಕುಟುಂಬಕ್ಕೂ ಸಹಾಯ ಮಾಡುತ್ತೇನೆ ಎಂದು ಚಿದಾನಂದ ಸವದಿ ಹೇಳಿದ್ದಾರೆ.

SCROLL FOR NEXT