ರಾಜ್ಯ

ತಮಿಳುನಾಡು ನಡೆಯಿಂದ ಅಚ್ಚರಿಯೇನಿಲ್ಲ... ಮೇಕೆದಾಟು ಯೋಜನೆಯನ್ನು ಮಾಡಿಯೇ ಮಾಡುತ್ತೇವೆ: ಬೊಮ್ಮಾಯಿ

Srinivasamurthy VN

ಬೆಂಗಳೂರು: ಸುಮಾರು ನಾಲ್ಕು ದಶಕಗಳ ಹಿಂದಿನ ಈ ಮೇಕೆದಾಟು ಯೋಜನೆಗೆ ಈಗಾಗಲೇ ಡಿಪಿಆರ್ ಆಗಿದ್ದು, ಈ ಯೋಜನೆಯನ್ನು ನಾವು ಮಾಡಿಯೇ ಮಾಡುತ್ತೇವೆ ಎಂದು ಗೃಹಸಚಿವರೂ ಆಗಿರುವ ಕಾನೂನು ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ತಮಿಳುನಾಡು ಸರ್ಕಾರ ಈ ಹಿಂದಿನಿಂದಲೇ ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ತಮಿಳುನಾಡು ಈ ವಿಚಾರದಲ್ಲಿ ಹೊಸದಾಗಿ ಆಕ್ಷೇಪ ಮಾಡುತ್ತಿಲ್ಲ. ತಮಿಳುನಾಡಿನಲ್ಲಿ ಸರ್ಕಾರ ಬದಲಾಗಿದ್ದರಿಂದ ಈಗ ಯೋಜನೆಗೆ ಹೊಸ ಸರ್ಕಾರ ವಿರೋಧ ವ್ಯಕ್ತಪಡಿಸುತ್ತಿದೆ. ಎರಡೂ ರಾಜ್ಯಗಳಿಗೆ ಅನುಕೂಲ ಆಗತ್ತದೆ ಎಂದು ನಾವು ಅರ್ಥ ಮಾಡಿಸುವ ಪ್ರಯತ್ನ ಮಾಡಿದ್ದೆವು. ಆದರೆ ಅವರ ಉತ್ತರದ ವೈಖರಿ ಸರಿಯಾಗಿಲ್ಲ ಎಂದರು.

ಯೋಜನೆಗೆ ನಾಲ್ಕು ಪ್ರೊಜೆಕ್ಟ್ ಮಾಡಲಾಗಿದ್ದು ಅದೆಲ್ಲ ನ್ಯಾಷನಲ್ ಹೈಡ್ರೋ ಇಲೆಕ್ಟ್ರಿಕ್ ಕಾರ್ಪೋರೇಷನ್ ಗೈಡ್ ಮಾಡಿತ್ತು.ಅದಾದ ಮೇಲೆ ಹಲವಾರು ಬಾರಿ ಮಾರ್ಪಾಡಾಗಿದೆ.2012 ರಲ್ಲಿ ಈ ಯೋಜನೆಗೆ ಹೊಸ ಡಿಪಿಆರ್ ಮಾಡಲಾಗಿತ್ತು. ಕುಡಿಯುವ ನೀರಿನ ಸಲುವಾಗಿ ಬಳಕೆ ಮಾಡಲು ನಿರ್ಧಾರ ಮಾಡಲಾಗಿದೆ. ಯೋಜನೆ ಅನುಷ್ಠಾನಕ್ಕೆ ನಾವು ನಮ್ಮ ಕಾನೂನು ಹೋರಾಟವನ್ನು ಮುಂದುವರೆಸುತ್ತೇವೆ. ಪರಿಸರ ಸಂಬಂಧಿ ಅನುಮತಿ ಕೂಡ ತೆಗೆದುಕೊಳ್ಳುತ್ತೇವೆ ಎಂದು ಬೊಮ್ಮಾಯಿ ಹೇಳಿದರು.

ಕೇರಳ ಗಡಿ ಭಾಗದಲ್ಲಿ ಸ್ಯಾಟಲೈಟ್ ಫೋನ್ ಗಳ ಮೇಲೆ ನಿರಂತರ ಕಣ್ಣಿಟ್ಟಿದ್ದೇವೆ.ಅಕ್ರಮ ಅರಣ್ಯ ಉತ್ಪನ್ನ ಸಾಗಣೆಗಳ ಬಗ್ಗೆಯೂ ಕೂಡ ಪತ್ತೆ ಮಾಡಿ ಕ್ರಮ ಜರುಗಿಸಿದ್ದೇವೆ. ಕಾಲಕಾಲಕ್ಕೆ ಕಾನೂನು ಪ್ರಕಾರ ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಬೊಮ್ಮಾಯಿ ತಿಳಿಸಿದರು.

SCROLL FOR NEXT