ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷರು, ಕನ್ನಡಪರ ಚಿಂತಕರು ಹಾಗೂ ಕೆ ಇ ಬೋರ್ಡ್ ಶಾಲೆಯ ಹಾಗೂ ವಿದ್ಯಾರಣ್ಯ ಶಾಲೆಯ ವಿಶ್ರಾಂತ ಶಿಕ್ಷಕರಾಗಿದ್ದ ಕೃಷ್ಣ ಜೋಶಿ (76) ಇಂದು ಗೋವಾದ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನವಾಗಿದ್ದಾರೆ.
ದೂರದರ್ಶನದ ವಿಶ್ರಾಂತ ಹೆಚ್ಚುವರಿ ಮಹಾನಿರ್ದೇಶಕ ನಾಡೋಜ ಡಾ. ಮಹೇಶ ಜೋಶಿ ಅವರ ಸಹೋದರರಾದ ಕೃಷ್ಣ ಜೋಶಿ 24 ಆಗಸ್ಟ್ 1945 ರಂದು ಹುಬ್ಬಳ್ಳಿಯ ಶ್ರೀ ಕೃಷ್ಣೇಂದ್ರ ಸ್ವಾಮಿಗಳ ಮಠದಲ್ಲಿ ಜನಿಸಿದ್ದರು.
ಮೃತರು ಮಗ , ಸೊಸೆ, ಮೊಮ್ಮಗಳು, ಮಗಳು, ಸೇರಿದಂತೆ 4 ಸಹೋದರರು ಹಾಗೂ ಇಬ್ಬರು ಸಹೋದರಿಯರನ್ನು ಮತ್ತು ಅಪಾರ ಸಂಖ್ಯೆಯ ಬಂಧು-ಬಳಗ ಹಾಗೂ ಸ್ನೇಹಿತರನ್ನು ಅಗಲಿದ್ದಾರೆ.
ಕರ್ನಾಟಕ ಎಜುಕೇಶನ್ ಬೋರ್ಡಿನ ಅಂಗಸಂಸ್ಥೆಗಳಲ್ಲಿ ( ವಿದ್ಯಾರಣ್ಯ ಹೈಸ್ಕೂಲ್,ಹಾಗೂ ಕೆಇಬೋರ್ಡ್ಸ್ ಹೈಸ್ಕೂಲ್) ನಾಲ್ಕು ದಶಕಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಕೆ ಎಚ್ ಜೋಶಿ (ಕೃಷ್ಣ ಜೋಶಿ) ವಿದ್ಯಾವರ್ಧಕ ಸಂಘದ ಕಾರ್ಯಕಾರೀ ಸಮಿತಿ ಸದಸ್ಯರಾಗಿ, ಕೋಶಾಧ್ಯಕ್ಷರಾಗಿ ಸುಮಾರು 40 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ, ಪುರಸ್ಕಾರ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ, ದಿ ಸೆಕಂಡರಿ ಟೀಚರ್ಸ್ ಕೊ ಆಪ್ ಸೊಸೈಟಿಯ ನಿರ್ದೇಶಕರಾಗಿ, ಅಂಚೆ ಇಲಾಖೆಯ ಸಲಹಾ ಸಮಿತಿಯ ಸದಸ್ಯರಾಗಿ ಹೀಗೆ ಹಲವಾರು ಸಂಸ್ಥೆಗಳ ಸದಸ್ಯರಾಗಿ ಸಲ್ಲಿಸಿದ ಸೇವೆ ಸ್ಮರಣೀಯ.
ಧಾರವಾಡದಲ್ಲಿ ನಿರ್ಮಿಸಲಾಗಿರುವ ಕಾರ್ಗಿಲ್ ಸ್ತೂಪದ ಹಿಂದೆ ಇವರ ಶ್ರಮ ಅಪಾರವಾದದ್ದು.
ಪೋಸ್ಟ್ ಕಾರ್ಡ್ ಬಳಸಿ ಸ್ವ ಅಕ್ಷರಗಳ ಮಖೇನ ಹುಟ್ಟು ಹಬ್ಬದ ಶುಭಾಶಯ ತಿಳಿಸುವದು,ಶಿಕ್ಷಕರಿಗೆ ಶಿಕ್ಷಕ ದಿನಾಚರಣೆ ಶುಭಾಶಯ ಹೇಳುವದು, ದೂರವಾಣಿ ಮುಖಾಂತರ ನಿರಂತರ ಸಂಪರ್ಕದಲ್ಲಿರುವದು ಅವರ ನಿತ್ಯ ನಡೆಯಾಗಿತ್ತು. ಹಲವು ವರ್ಷ ಪತ್ರಕರ್ತರಾಗಿಯೂ ಸೇವೆ ಸಲ್ಲಿಸಿದ್ದರು.
ಮೃತರ ಅಂತ್ಯಕ್ರಿಯೆ ಇಂದು ಧಾರವಾಡದಲ್ಲಿ ನಡೆಯಲಿದೆ.