ರಾಜ್ಯ

ಮೇಕೆದಾಟು ಯೋಜನೆಯನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ: ಗೃಹ ಸಚಿವ ಬಸವರಾಜ ಬೊಮ್ಮಾಯಿ

Sumana Upadhyaya

ಬೆಂಗಳೂರು: ಮೇಕೆದಾಟು ಜಲಾಶಯ ಕುಡಿಯುವ ನೀರಿನ ಯೋಜನೆಯಾಗಿದ್ದು, ಯೋಜನೆಯಂತೆ ರಾಜ್ಯ ಸರ್ಕಾರ ಮುಂದುವರಿಸಲಿದೆ ಎಂದು ರಾಜ್ಯ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮೇಕೆದಾಟು ಯೋಜನೆಯನ್ನು ವಿರೋಧಿಸಿ ಕೇಂದ್ರ ಸರ್ಕಾರ ಅದಕ್ಕೆ ಅನುಮತಿ ಕೊಡಬಾರದೆಂದು ನಿನ್ನೆ ನಡೆದ ಸರ್ವಪಕ್ಷ ಸಭೆಯಲ್ಲಿ ತಮಿಳು ನಾಡು ತೆಗೆದುಕೊಂಡ ನಿರ್ಧಾರದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹೆಚ್ಚುವರಿ ಹರಿಯುವಿಕೆ ನೀರನ್ನು ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಗೆ ಬಳಕೆ ಮಾಡಲು ನಡೆಸುತ್ತಿರುವ ಯೋಜನೆಯಾಗಿದೆ, ಹಾಗಾಗಿ ಇದನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ, ಯೋಜನೆಗೆ ಸಂಬಂಧಪಟ್ಟಂತೆ ವಿಸ್ತೃತ ವರದಿಯನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿದೆ ಎಂದರು.

ಕರ್ನಾಟಕಕ್ಕೆ ಮೇಕೆದಾಟು ಯೋಜನೆಯನ್ನು ಜಾರಿಗೆ ತರುವ ಸಂಪೂರ್ಣ ಅಧಿಕಾರವಿದ್ದು, ಶೇಕಡಾ 100ರಷ್ಟು ಜಾರಿಗೊಳಿಸುತ್ತೇವೆ. ರಾಜ್ಯದ ಮನವಿಯನ್ನು ಕೇಂದ್ರ ಸರ್ಕಾರ ಪುರಸ್ಕರಿಸಲೇಬೇಕು. ಅಗತ್ಯವಿರುವ ಅನುಮೋದನೆಯನ್ನು ಪಡೆಯಲು ನಮ್ಮಿಂದಾದ ಎಲ್ಲಾ ಪ್ರಯತ್ನವನ್ನು ಮಾಡುತ್ತೇವೆ, ಬರಪರಿಸ್ಥಿತಿ ಸಮಯದಲ್ಲಿ ನೀರನ್ನು ಹಂಚಿಕೊಳ್ಳಲು ಅನುಕೂಲವಾಗುತ್ತದೆ ಎಂದು ತಮಿಳು ನಾಡು ಸರ್ಕಾರ ಅರ್ಥ ಮಾಡಿಕೊಳ್ಳಲೇಬೇಕು ಎಂದರು.

ಕೇಂದ್ರ ಜಲಶಕ್ತಿ ಖಾತೆ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಅವರ ಭೇಟಿ ಸಂದರ್ಭದಲ್ಲಿ ಈ ವಿಷಯ ಚರ್ಚೆಗೆ ಬರಲಿದೆ. ಜಲ ಜೀವನ್ ಮಿಷನ್ ಅನುಷ್ಠಾನವನ್ನು ಪರಿಶೀಲಿಸುವ ಮೊದಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಶೇಖಾವತ್ ಅವರೊಂದಿಗೆ ಸಭೆ ನಡೆಸಲಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ತಮಿಳುನಾಡು ವಿವಾದ ಸೃಷ್ಟಿಸುತ್ತಿದೆ, ರಾಜ್ಯ ಸರ್ಕಾರವು ಎಲ್ಲ ಅನುಮೋದನೆಗಳನ್ನು ಪಡೆದು ತಕ್ಷಣ ಕೆಲಸವನ್ನು ಪ್ರಾರಂಭಿಸಲಿ. ನಾವು ಸರ್ಕಾರದೊಂದಿಗೆ ನಿಲ್ಲುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ತಮಿಳುನಾಡಿನ ಎಲ್ಲಾ ರಾಜಕೀಯ ಪಕ್ಷಗಳು ಮೇಕೆದಾಟು ಯೋಜನೆಯನ್ನು ವಿರೋಧಿಸುವ ಅಜೆಂಡಾ ಹೊಂದಿವೆ ಎಂದು ಕಾಂಗ್ರೆಸ್ ಹೇಳಿದೆ. ಮೇಕೆದಾಟು ಯೋಜನೆ ನನ್ನ ವಿಧಾನಸಭಾ ಕ್ಷೇತ್ರದ ಕನಕಪುರದಲ್ಲಿದೆ. ನೀರನ್ನು ಬೆಂಗಳೂರಿಗೆ ಮತ್ತು ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತದೆ, ಇದನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಹಿಂದೆ ಜಲಸಂಪನ್ಮೂಲ ಸಚಿವರಾಗಿ ಸೇವೆ ಸಲ್ಲಿಸಿದ್ದ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಅವರು ಎಲ್ಲಾ ಅನುಮೋದನೆಗಳನ್ನು ಪಡೆಯಬೇಕು ಎಂದು ಅವರು ಹೇಳಿದರು.

SCROLL FOR NEXT