ರಾಜ್ಯ

ನಗರದಲ್ಲಿ ಹಂತ-ಹಂತವಾಗಿಯೇ ಲಾಕ್ಡೌನ್ ತೆರವು: ಗೌರವ್ ಗುಪ್ತಾ

Manjula VN

ಬೆಂಗಳೂರು: ನಗರದಲ್ಲಿ ಒಮ್ಮೆಲೆ ಲಾಕ್ಡೌನ್ ತೆರವು ಸಾಧ್ಯವೇ ಇಲ್ಲ. ಹಂತ ಹಂತವಾಗಿ ತೆರವುಗೊಳಿಸಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಬುಧವಾರ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿನ ಪ್ರಸ್ತುತದ ಕೋವಿಡ್ ಪರಿಸ್ಥಿತಿ ಕುರಿತು ಸರ್ಕಾರ ತಜ್ಞರೊಂದಿಗೆ ಮಾತುಕತೆ ನಡೆಸುತ್ತಿದೆ. ಶೀಘ್ರದಲ್ಲೇ ಅನ್'ಲಾಕ್-4ರ ಮಾರ್ಗಸೂಚಿ ಪ್ರಕಟಿಸಲಿದೆ. ಜನರ ಆರೋಗ್ಯ ಗಮನದಲ್ಲಿಟ್ಟುಕೊಂದು ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ. 

ಇದೇ ವೇಳೆ ಕೊರೋನಾ 3ನೇ ಅಲೆ ಸಿದ್ಧತೆ ಕುರಿತು ಮಾತನಾಡಿದ ಅವರು, ಎಷ್ಟರ ಪ್ರಮಾಣದಲ್ಲಿ ಜನರು ಲಸಿಕೆ ಪಡೆದುಕೊಂಡಿದ್ದಾರೆಂಬುದನ್ನು ಎಂದು ಸರ್ಕಾರ ಖಚಿತಪಡಿಸಿಕೊಳ್ಳಬೇಕಿದೆ. ಬೆಂಗಳೂರಿನಲ್ಲಿ ವಯಸ್ಕ ಜನಸಂಖ್ಯೆಯ ಶೇ.80 ರಷ್ಟು ಜನರಿಗಾದರೂ ಜುಲೈ ಅಂತ್ಯದ ವೇಳೆಗೆ ಕನಿಷ್ಠ ಒಂದು ಡೋಸ್‌ ಲಸಿಕೆ ನೀಡುವ ಗುರಿಯನ್ನು ಹೊಂದಲಾಗಿದೆ. ಈ ವರೆಗೂ 1.80 ಲಕ್ಷ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಕೆ ಸಲಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಲಸಿಕೆ ವಿತರಣೆ ಕಡಿಮೆಯಿದ್ದು, ಪ್ರಸ್ತುತ ಲಭ್ಯವಿರುವ ಲಸಿಕೆಗಳನ್ನು ಬಳಕೆ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಈ ವರೆಗೂ ಶೇ.70ರಷ್ಟು ಜನರಿಗೆ ಮೊದಲ ಡೊಸ್ ಲಸಿಕೆ ಹಾಕಲಾಗಿದೆ. ಉಳಿದವರಿಗೆ ಲಸಿಕೆ ನೀಡುವ ಕುರಿತು ಮನೆ ಮನೆ ಸಮೀಕ್ಷೆ ನಡೆಸಲಾಗುತ್ತಿದೆ ಎಂದಿದ್ದಾರೆ. 

ಇದೇ ವೇಳೆ ಆಸ್ತಿ ತೆರಿಗೆ ಕುರಿತು ಮಾತನಾಡಿದ ಅವರು, ಆಸ್ತಿ ತೆರಿಗೆಯನ್ನು ನಿಗದಿತ ಅವಧಿಯೊಳಗೆ ಪಾವತಿಸುವವರಿಗೆ ಜೂ.30ರವರೆಗೆ ನೀಡಿದ್ದ ಶೇ.5ರಷ್ಟು ರಿಯಾಯಿತಿ ಮುಗಿದಿದೆ. ಈ ವರ್ಷ ಆಸ್ತಿ ತೆರಿಗೆಯನ್ನು ಎಲ್ಲರೂ ಕಟ್ಟಬೇಕು. ಕಂದಾಯ ಕ್ರೋಢೀಕರಣ ಮಾಡುವ ನಿಟ್ಟಿನಲ್ಲಿ ಎಲ್ಲಾ ಕಂದಾಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದ್ದು, ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ. 

SCROLL FOR NEXT