ರಾಜ್ಯ

ಅನ್ಲಾಕ್ 3.0 ಬಳಿಕ ಪ್ರವಾಸಿ ತಾಣಗಳತ್ತ ಪ್ರವಾಸಿಗರ ದಂಡು, ನಿಸರ್ಗದ ಮಡಿಲಲ್ಲಿ ಜನವೋ ಜನ!

Srinivasamurthy VN

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕದಿಂದಾಗಿ ಮುಚ್ಚಲ್ಪಟ್ಟಿದ್ದ ಪ್ರವಾಸಿತಾಣಗಳು ಇದೀಗ ಓಪನ್ ಆಗಿದ್ದು, ಆನ್ ಲಾಕ್ 3.0 ಬಳಿಕ ಪ್ರವಾಸಿತಾಣಗಳತ್ತ ಪ್ರವಾಸಿಗರ ಆಗಮನ ಜೋರಾಗಿದೆ. ಅದರಲ್ಲೂ ನೈಸರ್ಗಿಕ ತಾಣಗಳಿಗೆ ವ್ಯಾಪಕ ಬೇಡಿಕೆ ಸೃಷ್ಟಿಯಾಗಿದ್ದು, ಪ್ರಕೃತಿ ಸೌಂದರ್ಯ ಸವಿಯಲು ದಾಖಲೆ ಮಟ್ಟದಲ್ಲಿ ಪ್ರವಾಸಿಗರ ದಂಡು ಆಗಮಿಸುತ್ತಿದೆ. 

ಈ ಕುರಿತಂತೆ ಮಾಹಿತಿ ನೀಡಿರುವ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಶರ್ಮಾ ಅವರು, 'ನಗರ ಪ್ರವಾಸೋದ್ಯಮಕ್ಕಿಂತ ಹೆಚ್ಚಾಗಿ, ಪ್ರಕೃತಿ ತಾಣಗಳಿಗೆ ವ್ಯಾಪಕ ಬೇಡಿಕೆ ಇದೆ. ಪ್ರಮುಖವಾಗಿ ನಂದಿ ಬೆಟ್ಟ, ಜೋಗ್ ಫಾಲ್ಸ್ ಮತ್ತು ಅಲಮಟ್ಟಿಯಲ್ಲಿ ಉತ್ತಮ  ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಅಂತೆಯೇ ಕೊಡಗಿನಲ್ಲೂ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಮುಂದಿನ 2-3 ದಿನಗಳಲ್ಲಿ ಈ ಸಂಖ್ಯೆ ದ್ವಿಗುಣವಾಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. 

ಇಷ್ಟು ಮಾತ್ರವಲ್ಲದೇ ಪ್ಯಾಕೇಜ್ ಪ್ರವಾಸಗಳಿಗೆ ಸಂಬಂಧಿಸಿದಂತೆ, ತಿರುಪತಿಗೆ 160-170 ಟಿಕೆಟ್ಗಳನ್ನು ಕಾಯ್ದಿರಿಸಲಾಗುತ್ತಿದೆ ಎಂದು ಶರ್ಮಾ ಮಾಹಿತಿ ನೀಡಿದ್ದು, ಸತತವಾಗಿ ಲಾಕ್ ಡೌನ್ ನಿಂದಾಗಿ ಮನೆಯೊಳಗೇ ಇದ್ದ ಜನ ಇದೀಗ ಹೊರಗೆ ಓಡಾಡಲು ಇಚ್ಛಿಸುತ್ತಿದ್ದಾರೆ. ಸಣ್ಣ ಮತ್ತು ದೀರ್ಘ ಪ್ರವಾಸಿಗರ  ಸಂಖ್ಯೆ ಹೆಚ್ಚುತ್ತಿದ್ದು, ಲಾಕ್‌ಡೌನ್‌ನಿಂದ ವಿರಾಮ ತೆಗೆದುಕೊಳ್ಳಲು ಉತ್ಸುಕರಾಗಿರುವ ಜನರು ಪ್ರವಾಸಿ ತಾಣಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ಈ ಕೋವಿಡ್ ಸಾಂಕ್ರಾಮಿಕ ಮುಂಚಿನ ಪರಿಸ್ಥಿತಿಗೆ ಹೋಲಿಕೆ ಮಾಡಿದರೆ ಇನ್ನೂ ಜನ ಸಂಪೂರ್ಣವಾಗಿ ಹೊರಗೆ ಬರುತ್ತಿಲ್ಲ. ಬೆಂಗಳೂರಿನಿಂದ ಹೆಚ್ಚಿನವರು ದೀರ್ಘ ಸ್ಥಳಗಳಿಗೆ ಪ್ರಯಾಣಿಸಲು ಪ್ರಾರಂಭಿಸಿಲ್ಲ. ಜನರಲ್ಲಿ ಇನ್ನೂ ಸ್ವಲ್ಪ ಹಿಂಜರಿಕೆ ಇದೆ. ನಾವು ಈಗ ಯಾವುದೇ ಹೊಸ ಪ್ಯಾಕೇಜುಗಳನ್ನು ನೀಡುವ ಬದಲು ಜನರ ವಿಶ್ವಾಸವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದೇವೆ ಎಂದು ಪ್ರವಾಸೋದ್ಯಮ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಇದೇ ವಿಚಾರವಾಗಿ ತಮ್ಮ ಅನಿಸಿಕೆ ಹಂಚಿಕೊಂಡಿರುವ ಟ್ರಾವೆಲ್ ಏಜೆಂಟರು, ಸಾಕಷ್ಟು ಮಂದಿ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಬಹುತೇಕ ಜನ ಪ್ರವಾಸಿ ತಾಣಗಳತ್ತ ಮುಖ ಮಾಡಿದ್ದು, ಇಲ್ಲಿಂದಲೇ ಕೆಲಸ ಮಾಡಲು ಉತ್ಸುಕರಾಗಿದ್ದಾರೆ, ಪ್ರಸ್ತುತ ಈಗ ಆಫ್ ಬೀಟ್ ತಾಣ (ಟ್ರಕ್ಕಿಂಗ್ ಮತ್ತು  ದೂರದ ತಾಣಗಳು)ಗಳನ್ನು ಅನ್ವೇಷಿಸುವತ್ತ ಯೋಚಿಸಿಲ್ಲ. ಕಳೆದ ವರ್ಷ ಆನ್ ಲಾಕ್ ವೇಳೆ ಸಾಕಷ್ಟು ಪ್ರವಾಸಿಗರು ಕಡಿಮೆ ಪರಿಚಿತ ತಾಣಗಳತ್ತ ಹೋಗುತ್ತಿದ್ದರು. ಈ ಬಾರಿ ಜನ ಮುಂಜಾಗ್ರತಾ ಕ್ರಮವಾಗಿ ಹೆಚ್ಚು ಖ್ಯಾತಿ ಗಳಿಸಿರುವ ತಾಣಗಳತ್ತ ತೆರಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ ಅವರು ಮಾತನಾಡಿ, ಜನರು ಕಬಿನಿಗೆ ಆದ್ಯತೆ ನೀಡಿದ್ದರೂ, ಈ ಬಾರಿ ಭದ್ರಾ ಪ್ರವಾಸಿ ತಾಣದತ್ತ ಪ್ರವಾಸಿಗರ ಆಗಮನ ಹೆಚ್ಚಾಗಿದೆ. ಏಕೆಂದರೆ ಮಳೆಗಾಲದಲ್ಲಿ ದೋಣಿ ಮತ್ತು ವನ್ಯಜೀವಿ ಸಫಾರಿ ಇರುವ ಕಾರಣ ಈ ತಾಣವನ್ನು ಪ್ರವಾಸಿಗರು ಹೆಚ್ಚು ಇಷ್ಟ ಪಡುತ್ತಿದ್ದಾರೆ. ದರಗಳು ಕೂಡ ತುಲನಾತ್ಮಕವಾಗಿ ಕಡಿಮೆ ಇರುವುದು ಪ್ರವಾಸಿಗರ ಹೆಚ್ಚಳಕ್ಕೆ ಇನ್ನೊಂದು ಕಾರಣ. ಪ್ರವಾಸಿಗರು ಬಂಡೀಪುರ, ಕೆ.ಗುಡಿ, ಜೋಗ, ಶರಾವತಿ ಮತ್ತು ದೇವ್‌ಬಾಗ್‌ಗೂ ಆದ್ಯತೆ ನೀಡುತ್ತಿದ್ದಾರೆ ಎಂದು ಹೇಳಿದರು.

ಇನ್ನು ಬೆಂಗಳೂರಿಗೆ ಸಮೀಪದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲೂ ದಾಖಲಾಗುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು, ಬಿಬಿಪಿ ಕಾರ್ಯನಿರ್ವಾಹಕ ನಿರ್ದೇಶಕ ವನಾಶ್ರಿ ವಿಪಿನ್ ಸಿಂಗ್ ಈ ಬಗ್ಗೆ ಮಾತನಾಡಿ ವಾರದ ದಿನಗಳಲ್ಲಿ ಇಲ್ಲಿಗೆ ಆಗಮಿಸುವ ಜನರ ಸಂಖ್ಯೆ ಸುಮಾರು 1000-1500ರಷ್ಟಿದ್ದು, ವಾರಾಂತ್ಯದಲ್ಲಿ, ವಿಶೇಷವಾಗಿ ಭಾನುವಾರದಂದು ಸುಮಾರು 3000-3500 ಮಂದಿ ಇರುತ್ತಾರೆ ಎಂದು ಹೇಳಿದ್ದಾರೆ.

SCROLL FOR NEXT