ರಾಜ್ಯ

ಪರೀಕ್ಷಾ ಕೇಂದ್ರ ಸುರಕ್ಷಾ ಕೇಂದ್ರಗಳಾಗಿರುತ್ತವೆ, ಮಕ್ಕಳು ನಿರ್ಭೀತಿಯಿಂದ ಬನ್ನಿ: ಶಿಕ್ಷಣ ಸಚಿವ ಸುರೇಶ್ ಕುಮಾರ್

Sumana Upadhyaya

ಬೆಂಗಳೂರು: ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭಕ್ಕೆ ಇನ್ನೊಂದೇ ದಿನ ಬಾಕಿ. ಈ ಹಿನ್ನೆಲೆಯಲ್ಲಿ ಶನಿವಾರ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಇಂದು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಈ ವರ್ಷ ರಾಜ್ಯದಲ್ಲಿ ಸುಮಾರು 4 ಸಾವಿರದ 885 ಪರೀಕ್ಷಾ ಕೇಂದ್ರಗಳಿವೆ.ಕಳೆದ ವರ್ಷ ಇದ್ದದ್ದು 3 ಸಾವಿರದ 310 ಕೇಂದ್ರಗಳು, ಕಳೆದ ವರ್ಷ 48 ಸಾವಿರ ಪರೀಕ್ಷಾ ಕೇಂದ್ರಗಳಿದ್ದರೆ, ಈ ವರ್ಷ 73 ಸಾವಿರದ 066 ಪರೀಕ್ಷಾ ಕೇಂದ್ರಗಳಿವೆ. ಎಲ್ಲಾ ಕಡೆ ನಿನ್ನೆ, ಇಂದು ಮತ್ತು ನಾಳೆ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವಾಭ್ಯಾಸ ಮಾಡುತ್ತಿದ್ದಾರೆ ಎಂದರು.

ಈ ಬಾರಿ ಪ್ರತಿ ಕೊಠಡಿಯಲ್ಲಿ 12ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇರಬಾರದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಕೆ, ಮಾಸ್ಕ್ ಧರಿಸುವಿಕೆ, ಕೊಠಡಿಯೊಳಗೆ ಅತ್ಯಂತ ಸ್ವಚ್ಛವಾಗಿರಬೇಕು ಎಂಬ ನಿಯಮವನ್ನು ತರಲಾಗಿದೆ. ಪ್ರತಿ ಹಂತಗಳಲ್ಲಿಯೂ ಕೋವಿಡ್ ನಿಯಮಗಳನ್ನು ಪಾಲಿಸಲಾಗುತ್ತಿದೆ. ಶಾಲೆಗಳು ಕೂಡ ತಮ್ಮದೇ ರೀತಿಯಲ್ಲಿ ನಿಯಮಗಳನ್ನು ಹಾಕಿಕೊಂಡಿವೆ ಎಂದರು.

ಈ ಬಾರಿ ಸಿಬ್ಬಂದಿಗಳ ಸಂಖ್ಯೆ ಕೂಡ ಹೆಚ್ಚಿದೆ, ಕಳೆದ ವರ್ಷ ಸುಮಾರು 72 ಸಾವಿರ 853 ಸಿಬ್ಬಂದಿ ಎಸ್ ಎಸ್ ಎಲ್ ಸಿ ಪರೀಕ್ಷೆ ಸಮಯದಲ್ಲಿದ್ದರೆ, ಈ ವರ್ಷ 1 ಲಕ್ಷದ 19 ಸಾವಿರದ 469 ಸಿಬ್ಬಂದಿಯಿದ್ದಾರೆ. ಇಲಾಖೆಯಿಂದ ಎಲ್ಲಾ ಜಿಲ್ಲೆಗಳಿಗೂ ನೋಡಲ್ ಅಧಿಕಾರಿಯನ್ನು ನೇಮಿಸಿದ್ದೇವೆ. ಅವರು ಯಾವುದೇ ರೀತಿಯಲ್ಲಿ ಲೋಪವಾಗದಂತೆ ಕ್ರಮ ಕೈಗೊಳ್ಳಲಿದ್ದರೆ ಎಂದರು.

ಪರೀಕ್ಷಾ ಕೇಂದ್ರ ಸುರಕ್ಷಾ ಕೇಂದ್ರವಾಗಿದ್ದು ಪೋಷಕರು ಭಯಭೀತರಾಗದೆ ಪರೀಕ್ಷೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುವಂತೆ ಶಿಕ್ಷಣ ಸಚಿವರು ಮನವಿ ಮಾಡಿದ್ದಾರೆ.

SCROLL FOR NEXT