ರಾಜ್ಯ

ಕೋವಿಡ್-19: ನಗರದ ಕೆಲ ವಾರ್ಡ್ ಗಳಲ್ಲಿ ಇಳಿಯದ ಸೋಂಕು, ಸೂಕ್ಷ್ಮ ವಿಶ್ಲೇಷಣೆಗೆ ಬಿಬಿಎಂಪಿ ಮುಂದು

Manjula VN

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ಸೋಂಕು ಇಳಿಕೆಯಾಗುತ್ತಿದ್ದರೂ, ಕೆಲವು ವಾರ್ಡ್ ಗಳಲ್ಲಿ ಸೋಂಕು ಇಳಿಕೆಯಾಗದಿರುವುದು ಆತಂಕ ಹೆಚ್ಚಾಗುವಂತೆ ಮಾಡಿದೆ. 

ಬೊಮ್ಮನಹಳ್ಳಿ, ಮಹದೇವಪುರ ಹಾಗೂ ಪೂರ್ವ ವಲಯದಲ್ಲಿ ಸೋಂಕು ಇಳಿಕೆಯಾಗದ ಬೆಳವಣಿಗೆಗಳು ಕಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ಸೂಕ್ಷ್ಮ ವಿಶ್ಲೇಷಣೆ ನಡೆಸಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರೆ. 

ಕೇಂದ್ರ ಮತ್ತು ವಾರ್ಡ್ ಮಟ್ಟದ ವಾರ್ ರೂಮ್ ನಲ್ಲಿರುವ ಸಿಬ್ಬಂದಿಗಳು ಈ ಬೆಳವಣಿಗೆಯನ್ನು ಗಮನಿಸುತ್ತಿದ್ದು, ಕಳೆದ 10 ದಿನಗಳಿಂದ ತಿಳಿದುಬಂದಿರುವ ಮಾಹಿತಿ ಪ್ರಕಾರ, ಬೆಳ್ಳಂದೂರು, ಕುವೆಂಪು ನಗರ, ಹೊರಮಾವು, ಉತ್ತರಹಳ್ಳಿ, ಸಿಂಗಸಂದ್ರ, ಹಗದೂರು, ವರ್ತೂರು, ಆಗರ, ಹೂಡಿ ಹಾಗೂ ಹೆಮ್ಮಿಗೆಪುರದಲ್ಲಿ ಹೆಚ್ಚೆಚ್ಚು ಸೋಂಕು ಪ್ರಕರಣಗಳು ವರದಿಯಾಗುತ್ತಿವೆ ಎಂದು ತಿಳಿದುಬಂದಿದೆ. 

ಬೆಂಗಳೂರಿನಲ್ಲಿ ಒಟ್ಟಾರೆ ಪಾಸಿಟಿವಿಟಿ ಪ್ರಮಾಣ ಶೇ.0.68ರಷ್ಟಿದ್ದರೆ, ಬೊಮ್ಮನಹಳ್ಳಿ, ಮಹದೇವಪುರ ಹಾಗೂ ಪೂರ್ವ ವಲಯದಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.1.5- ಶೇ.1.8ರಷ್ಟಿದೆ ಎಂದು ಪಾಲಿಕೆ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಇದೀಗ ಹಳೇ ರೀತಿಯಲ್ಲಿಯೇ ಕೆಂಟೈನ್ಮೆಂಟ್ ಮಾದರಿಯನ್ನು ಅನುಸರಿಸಬೇಕಿದೆ. ಸೋಂಕಿತರ ಮನೆಗಳ ಮುಂದೆ ಪೋಸ್ಟರ್ ಗಳನ್ನು ಅಂಟಿಸು ಹಾಗೂ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಕೈಗಳ ಮೇಲೆ ಕ್ವಾರಂಟೈನ್ ಮುದ್ರೆಗಳನ್ನು ಒತ್ತಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. 

ಈ ಕುರಿತು ಸರ್ಕಾರದ ಆದೇಶಕ್ಕಾಗಿ ಕಾಯಲಾಗುತ್ತಿದೆ. ಪ್ರತಿಯೊಂದು ಪ್ರದೇಶವನ್ನು ಪ್ರತ್ಯೇಕವಾಗಿ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಹೇಳಿದ್ದಾರೆ. 

ಪ್ರತಿಯೊಂದು ಪ್ರಕರಣಗಳಲ್ಲಿ ಪರಿಸ್ಥಿತಿ ವಿಭಿನ್ನವಾಗಿದೆ. ಜನರು ಹೆಚ್ಚು ಹೆಚ್ಚಾಗಿ ಓಡಾಡುತ್ತಿರುವುದು, ವಲಸಿಗರು ಹೆಚ್ಚಾಗಿ ಓಡಾಡುತ್ತಿರುವುದರಿಂದಲೂ ಸೋಂಕು ಹೆಚ್ಚಾಗುತ್ತಿದೆ. ಪರಿಸ್ಥಿತಿಯ ಕುರಿತು ವಿಶ್ಲೇಷಣೆ ನಡೆಸಿ, ಪರಿಹಾರ ಕಂಡು ಹಿಡಿಯಲಾಗುತ್ತದೆ ಎಂದು ತಿಳಿಸಿದ್ದಾರೆ.

SCROLL FOR NEXT