ರಾಜ್ಯ

ಬಾಂಗ್ಲಾ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ: ಮಾಹಿತಿ ಕೇಳಿದ‌ ಎನ್ಐಎ

Manjula VN

ಬೆಂಗಳೂರು: ಬಾಂಗ್ಲಾದೇಶ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ‌ಕ್ಕೆ ಸಂಬಂಧಿಸಿದಂತೆ ಯುವತಿಯ ಕುರಿತು ಮಾಹಿತಿ ನೀಡುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ರಾಮಮೂರ್ತಿ ನಗರ ಪೊಲೀಸರಿಗೆ ಭಾನುವಾರ ಸೂಚಿಸಿದೆ ಎಂದು ತಿಳಿದುಬಂದಿದೆ. 

ಕಳೆದ ಮೇ 27 ರಂದು ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯಲ್ಲಿ ಯುವತಿ ಮೇಲೆ‌‌ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಆರೋಪಿಗಳು ವೇಶ್ಯಾವಾಟಿಕೆಯಲ್ಲಿ ತೊಡಗಿರುವುದು ಬಯಲಾಗಿತ್ತು.

ನಗರದ ಚನ್ನಸಂದ್ರ, ಕನಕನಗರದಲ್ಲಿ ಬಾಡಿಗೆ ಮನೆಯಲ್ಲಿ ಯುವತಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದರು. ಈ ವೇಳೆ ಆರೋಪಿಗಳ ವಶದಲ್ಲಿದ್ದ 7 ಬಾಂಗ್ಲಾ ಮೂಲದ ಯುವತಿಯರನ್ನು ಪೊಲೀಸರು ರಕ್ಷಿಸಿದ್ದರು. ಬಳಿಕ ಪ್ರಕರಣ ಹೆಣ್ಣೂರು ಪೊಲೀಸ್ ಠಾಣೆಗೆ ವರ್ಗಾವಣೆಯಾಗಿತ್ತು.

ನಕಲಿ ದಾಖಲೆಗಳನ್ನು ಸೃಷ್ಟಿಸಿ ಯುವತಿಯರನ್ನು ಬೆಂಗಳೂರಿಗೆ ಕರೆತಂದಿದ್ದ ಹಿನ್ನೆಲೆ ಯುವತಿಯರ ಸ್ಥಳೀಯ ದಾಖಲೆಗಳ ಕುರಿತು ಮಾಹಿತಿ ನೀಡುವಂತೆ ಎನ್​ಐಎ ಕೇಳಿದೆ. 

ಆಧಾರ್ ಕಾರ್ಡ್ ಮಾಡಿಸಲು ಕೊಟ್ಟಂತಹ ದಾಖಲೆಗಳೇನು?, ಯಾವೆಲ್ಲಾ ದಾಖಲೆಗಳನ್ನು ಪರಿಶೀಲಿಸಿ ಆಧಾರ್ ಕಾರ್ಡ್ ನೀಡಲಾಗಿತ್ತು?, ಇವರಿಗೆ ಆಧಾರ್ ಕಾರ್ಡ್ ಮಾಡಿಸಿಕೊಟ್ಟವರು ಯಾರು?. ಈ ಎಲ್ಲಾ ಮಾಹಿತಿ ನೀಡುವಂತೆ ಎನ್ಐಎ ಸ್ಥಳೀಯ ಪೊಲೀಸರ ಬಳಿ ಮಾಹಿತಿ ಕೇಳಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

SCROLL FOR NEXT