ರಾಜ್ಯ

ಬೆಂಗಳೂರು: ಪತಿ ಹತ್ಯೆಗೆ ಸುಪಾರಿ ಕೊಟ್ಟ ಪತ್ನಿ, ಪೊಲೀಸರ ಸಮಯಪ್ರಜ್ಞೆಯಿಂದ ಉಳಿದ ಅಮಾಯಕ ಜೀವ

Manjula VN

ಬೆಂಗಳೂರು: ಪ್ರಿಯಕರನ ಜೊತೆಗೆ ಸೇರಿ ಗಂಡನಿಗೆ ಸುಪಾರಿ ನೀಡಿ ಪತ್ನಿಯೇ ಕೊಲೆ ಮಾಡಿಸಲು ಯತ್ನಸಿದ ಘಟನೆ ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ನಡೆದಿದೆ. 

ಪ್ರಕರಣದಲ್ಲಿ ಪೊಲೀಸರ ಸಮಯ ಪ್ರಜ್ಞೆಯಿಂದ ಮುಗ್ಧ ವ್ಯಕ್ತಿಯೊಬ್ಬರ ಜೀವ ಉಳಿದಂತಾಗಿದೆ. ಬೆಂಗಳೂರಿನ ಮಾದನಾಯಕನಹಳ್ಳಿ ನಿವಾಸಿಯಾಗಿರುವ ರೂಪ ಮತ್ತು ಗಿರೀಶ್ ಮದುವೆ ಆರು ವರ್ಷಗಳ ಹಿಂದೆ ನಡೆದಿತ್ತು. ಕೆಲ ದಿನಗಳ ಕಾಲ ಮನೆಯಲ್ಲೇ ಇದ್ದ ಪತ್ನಿ ರೂಪ ಇತ್ತೀಚೆಗೆ ಕೆಲಸಕ್ಕೆ ಸೇರಿಕೊಂಡಿದ್ದಳು.

ಕೆಲಸಕ್ಕೆ ಸೇರಿದ ನಂತರ ರೂಪಾಗೆ ಕುಮಾರ್ ಜೈನ್ ಎಂಬ ವ್ಯಕ್ತಿಯ ಪರಿಚಯವಾಗಿದೆ. ನಂತರ ಪರಿಚಯ ಸ್ನೇಹ ಹಾಗೂ ಪ್ರೀತಿಗೆ ತಿರುಗಿದೆ. 

ಬಳಿಕ ರೂಪಾ ಪತಿ ಗಿರೀಶ್ ರನ್ನು ನೋಡುವ ರೀತಿ ಬದಲಾಗಿದೆ. ಪತ್ನಿ ತನ್ನನ್ನು ನಿರ್ಲಕ್ಷ್ಯ ಮಾಡುತ್ತಿರುವುದನ್ನು ಗಮನಿಸಿದ ಗಿರೀಶ್ ಅವರು ಕೆಲಸಕ್ಕೆ ಹೋಗುವುದು ಬೇಡ ಎಂದು ಹೇಳಿದ್ದಾರೆ. 

ಇದರಿಂದ ಬೇಸರಗೊಂಡ ರೂಪಾ, ಪ್ರಿಯಕರ ಕುಮಾರ್ ಜೈನ್ ಜೊತೆಗೆ ಸೇರಿ, ಗಂಡನ ಕೊಲೆಗೆ ಸಂಚು ರೂಪಿಸಿದ್ದಾಳೆ. ಅದರಂತೆ ಕುಮಾರ್ ಜೈನ್ ಮೂಲಕ ಹದಿನೈದು ಲಕ್ಷಕ್ಕೆ ಗಂಡನ ಕೊಲೆಗೆ ಸುಪಾರಿ ನೀಡಿದ್ದಾನೆ. 

ಇವರ ಪ್ಲಾನ್ ನಂತೆ ಮೂರು ಲಕ್ಷ ಅಡ್ವಾನ್ಸ್ ಪಡೆದ ನಾಲ್ವರು ಆರೋಪಿಗಳು, ಕೊಲೆಗೆ ಸಿದ್ಧತೆ ನಡೆಸಿ, ಗಿರೀಶ್ ಕೊಲೆ ಮಾಡಲು ಎಲ್ಲರೂ ಮಂಕಿ ಕ್ಯಾಪ್ ಹಾಕಿಕೊಳ್ಳುತ್ತಿದ್ದರು. ಇದೇ ವೇಳೆ ನೈಟ್ ರೌಂಡ್ಸ್ ಬಂದ ಮಾದನಾಯಕನಹಳ್ಳಿ ಪೊಲೀಸರು, ಮಂಕಿ ಕ್ಯಾಪ್ ಗಳನ್ನು ನೋಡಿ ಆರೋಪಿಗಳನ್ನು ಪ್ರಶ್ನಿಸಿದ್ದಾರೆ.

ಬಳಿಕ ಎಲ್ಲರನ್ನೂ ವಶಕ್ಕೆ ಪಡೆದು ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದ ವೇಳೆ ಸುಪಾರಿ ವಿಚಾರ ಬೆಳಕಿಗೆ ಬಂದಿದೆ. 

ಸದ್ಯ ಪ್ರಮುಖ ಆರೋಪಿ ರೂಪಾ, ಪ್ರಿಯಕರ ಸೇರಿ ಐವರನ್ನು ಪೊಲೀಸರು ಅರೆಸ್ಟ್ ಮಾಡಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.

SCROLL FOR NEXT