ರಾಜ್ಯ

ಆರ್'ಟಿಐ ಕಾರ್ಯಕರ್ತ ವೆಂಕಟೇಶ್ ಕೊಲೆ ಪ್ರಕರಣ; ಮೂವರು ಆರೋಪಿಗಳ ಬಂಧನ

Manjula VN

ಬೆಂಗಳೂರು: ಆರ್'ಟಿಐ ಕಾರ್ಯಕರ್ತ ವೆಂಕಟೇಶ್ ಕೊಲೆ ಪ್ರಕರಣ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ಮಂಗಳವಾರ ಬಂಧನಕ್ಕೊಳಪಡಿಸಿದ್ದಾರೆ. 

ಬಂಧಿತ ಆರೋಪಿಗಳನ್ನು ತಾವರೆಕೆರೆ ಟೌನ್ ನಿವಾಸಿ ಪ್ರದೀಪ್ ಕುಮಾರ್ ಅಲಿಯಾಸ್ ಪ್ರದೀ (33), ತಾವರಕೆರೆಯ ಮಂಜುನಾಥ ನಗರದ ನಿವಾಸಿ ಸತೀಶ್. ಟಿಸಿ (20), ತಾವರಕೆರೆಯ ಯಲಚಗುಪ್ಪೆ ನಿವಾಸಿ ತೇಜಸ್ ಕುಮಾರ್ ಎ (22) ಎಂದು ಗುರ್ತಿಸಲಾಗಿದೆ. 

ಆರ್'ಟಿಐ ಕಾರ್ಯಕರ್ತ ವೆಂಕಟೇಶ್ ಅಲಿಯಾಸ್ ಮಹೀಮಯ್ಯ (43) ಎಂಬುವವರ ಮೇಲೆ ಜುಲೈ 15 ರಂದು ದುಷ್ಕರ್ಮಿಗಳ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು. ದಾಳಿ ವೇಳೆ ವೆಂಕಟೇಶ್ ಅವರ ಬಲಗೈ ಹಾಗೂ ಕಾಲುಗಳನ್ನು ಕತ್ತರಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೆಂಕಟೇಶ್ ಅವರು ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಕೊನೆಯುಸಿರೆಳೆದಿದ್ದರು. 

ಪ್ರಕರಣ ಸಂಬಂಧ ತನಿಖೆ ಆರಂಭಿಸಿದ್ದ ಪೊಲೀಸರು ಇದೀಗ ಮೂವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ. ಹತ್ಯೆಯು ಹಣಕಾಸು ವಿಚಾರವಾಗಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. 

ಫೈನಾನ್ಶಿಯರ್ ಆಗಿರುವ ಪ್ರದೀಪ್ ಕುಮಾರ್ ವೆಂಕಟೇಶ್ ಅವರಿಗೆ ರೂ.10 ಲಕ್ಷ ಸಾಲ ನೀಡಿದ್ದಾರೆ. ಈ ಹಣಕ್ಕೆ ಅಲ್ಪ ಪ್ರಮಾಣದ ಬಡ್ಡಿ ನೀಡಿದ್ದ ವೆಂಕಟೇಶ್ ಅವರು, ಸಾಲದ ಹಣವನ್ನು ಹಿಂತಿರುಗಿಸಿರಲಿಲ್ಲ. ಇದರಿಂದ ಬೇಸರಗೊಂಡಿದ್ದ ಪ್ರದೀಪ್ ಅವರು ಹಲವು ಬಾರಿ ಹಣವನ್ನು ಹಿಂತಿರುಗಿಸುವಂತೆ ಮನವಿ ಮಾಡಿದ್ದಾರೆ. ಆದರೆ, ಇದಕ್ಕೆ ಒಪ್ಪದ ವೆಂಕಟೇಶ್ ಅವರು, ಪ್ರದೀಪ್ ವಿರುದ್ಧ ಪೊಲೀಸರಿಗೆ ದೂರು ನೀಡುವ ಬದರಿಕೆ ಹಾಕಿದ್ದಾರೆ. ಹೀಗಾಗಿ ವೆಂಕಟೇಶ್ ಅವರಿಗೆ ಪಾಠ ಕಲಿಸುವ ಸಲುವಾಗಿ ನಾಲ್ಕು ಮಂದಿಗೆ ಸುಪಾರಿ ನೀಡಿದ್ದಾರೆ. ವೆಂಕಟೇಶ್ ಅವರ ಮೇಲೆ ದಾಳಿ ನಡೆಸುವಂತೆ ತಿಳಿಸಿದ್ದಾರೆ. 

ಪ್ರದೀಪ್ ಸುಪಾರಿ ನೀಡಿದ ಹಿನ್ನೆಲೆಯಲ್ಲಿ ನಾಲ್ವರು ಆರೋಪಿಗಳು ವೆಂಕಟೇಶ್ ಅವರ ಮೇಲೆ ದಾಳಿ ನಡೆಸಿದ್ದಾರೆ. ಪ್ರಕರಣ ಸಂಬಂಧ ಪ್ರದೀಪ್ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದು, ಮತ್ತಿಬ್ಬರೂ ಆರೋಪಿಗಳಿಗಾಗಿ ಹುಡುಕಾಟ ಮುಂದುವರೆಸಿದ್ದಾರೆಂದು ತಿಳಿದುಬಂದಿದೆ. 

SCROLL FOR NEXT