ರಾಜ್ಯ

ಬಾಗಲಕೋಟೆಯಲ್ಲಿ ವರುಣನ ಆರ್ಭಟ: 25 ಗ್ರಾಮಗಳು ಮುಳುಗಡೆ, 600ಕ್ಕೂ ಹೆಚ್ಚು ಕುಟುಂಬಗಳ ಸ್ಥಳಾಂತರ

Manjula VN

ಬಾಗಲಕೋಟೆ: ಮಹಾರಾಷ್ಟ್ರ ಪಶ್ಚಿಮ ಘಟ್ಟದಲ್ಲಿ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಹಲವಾರು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಬೆಳಗಾವಿ ಜಿಲ್ಲೆಯ ಬಹುತೇಕ ಜಲಾಶಯಗಳು ಭರ್ತಿಯಾಗಿದ್ದು, ಘಟಪ್ರಭಾ ಹಾಗೂ ಕೃಷ್ಣಾ ನದಿಗಳು ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಬಾಗಲಕೋಟೆಯ 25 ಗ್ರಾಮಗಳು ಮುಳುಗಡೆಗೊಂಡಿವೆ. 

ಹಿಡಕಲ್ ಸೇರಿದಂತೆ ಇತೆರ ಜಲಾಶಯಗಳ ಒಳ ಹರಿವು ಹೆಚ್ಚಾದ ಪರಿಣಾಮ ಘಟಪ್ರಭಾ ನದಿಗೆ ನೀರು ಬಿಡಲಾಗಿದ್ದು, ಪರಿಣಾಮ ನದಿ ತುಂಬಿ ಹರಿದು ಮುಧೋಳ ತಾಲೂಕಿಗೆ ತಲುಪಿ ಮುಧೋಳ ನಗರದ ಕೆಲ ಪ್ರದೇಶದಲ್ಲಿ ನುಗ್ಗಿದೆ. ಹೀಗಾಗಿ ಅಲ್ಲಿನ ಕುಟುಂಬಗಳನ್ನು ಸುರಕ್ಶಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಕೆಲ ಪ್ರಮುಖ ರಸ್ತೆಗಳ ಸಂಪರ್ಕ ಕಡಿತಗೊಂಡು ಸಂಚಾರ ಅಸ್ತವ್ಯಸ್ತಗೊಂಡಿದೆ.

ಮುಧೋಳ ನಗರದ ಪಕ್ಕದಲ್ಲಿ ಹರಿದಿರುವ ಘಟಪ್ರಭಾ ನದಿಗೆ ನಿರ್ಮಿಸಲಾದ ಮುಧೋಳ-ಯಾದವಾಡ ಸೇತುವೆ ತುಂಬಿ ಹರಿಯುತ್ತಿದ್ದು, ಭಾನುವಾರ ಬೆಳಿಗ್ಗೆಯಿಂದಲೇ ಸಂಪರ್ಕ ಕಡಿತಗೊಂಡಿದ. ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ತರಹದ ವಾಹನಗಳ ಓಡಾಟ ಸಂಪೂರ್ಣ ನಿಷೇಧಿಸಲಾಗಿದೆ ಘಟಪ್ರಭಾ ನದಿಗೆ ಹೆಚ್ಚಿನ ನೀರು ಹರಿದು ಬರುತ್ತಿರುವುದರಿಂದ ಮುಧೋಶ ನಗರಸಭೆ ವ್ಯಾಪ್ತಿಯ ಕಂಬಾಳೆ ಗಲ್ಲಿ, ಕುಂಬಾರ ಗಲ್ಲಿ ಹಾಗೂ ಬೇಪಾರಿ ಗಲ್ಲಿಯ ಸುತ್ತಲೂ ನೀರು ಆವರಿಸಿದ್ದರಿಂದ ಇಲ್ಲಿ ವಾಸಿಸುವ ನೂರಾರು ಕುಟುಂಬಗಳನ್ನು ನಗರಸಭೆಯವರು ಸ್ಥಳಾಂತರಗೊಳಿಸಿದ್ದಾರೆ. 

ಮುಧೋಳದಲ್ಲಿ ಒಟ್ಟು 7 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, 1,560 ಮಂದಿಗೆ ವಸತಿ ಕಲ್ಪಿಸಲಾಗಿದೆ ಎಂದು ಜಿಲ್ಲಾ ಆಡಳಿತ ಮಂಡಳಿ ಮಾಹಿತಿ ನೀಡಿದೆ. 

ಮುಧೋಳ ತಹಶೀಲ್ದಾರ್ ಸಂಗಮೇಶ್ ಬಡಗಿ ಪ್ರತಿಕ್ರಿಯೆ ನೀಡಿ, ಮುಂದಿನ 24 ಗಂಟೆಗಳಲ್ಲಿ ಘಟಪ್ರಭಾ ನದಿ ಅಪಾಯಕಾರಿ ಮಟ್ಟದಲ್ಲಿ ಹರಿಯುವ ಸಾಧ್ಯತೆಯಿದೆ. ಮಳೆ ಸಂಪೂರ್ಣವಾಗಿ ನಿಂತುಹೋದ ಕಾರಣ 36 ಗಂಟೆಗಳ ಬಳಿಕ ನೀರಿನ ಮಟ್ಟ ಕಡಿಮೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಹಿಡಕಲ್ ಅಣೆಕಟ್ಟಿನಿಂದ ಹೊರಹರಿವು ಕೂಡ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

SCROLL FOR NEXT