ರಾಜ್ಯ

ಹಳಿ ಮೇಲೆ ಮುಂಡ, ಲಾರಿನಲ್ಲಿ ರುಂಡ ಪತ್ತೆಯಾಗಿದ್ದ ಪ್ರಕರಣ: ಆರೋಪಿ ಬಂಧನ

Manjula VN

ಬೆಂಗಳೂರು: ಬೆಂಗಳೂರು: ತುಮಕೂರು ಬಳಿ ರೈಲು ಹಳಿ ಮೇಲೆ ಮುಂಡ ಹಾಗೂ ಬಾಗಲಕೋಟೆ ಜಿಲ್ಲೆಯ ಇಳಕಲ್‌ನಲ್ಲಿ ಲಾರಿಯಲ್ಲಿ ರುಂಡ ಪತ್ತೆಯಾಗಿದ್ದ ಪ್ರಕರಣವನ್ನು ಭೇದಿಸಿರುವ ರೈಲ್ವೆ ಪೊಲೀಸರು, ಆರೋಪಿ ಬಾಲಚಂದ್ರ ಎಂಬುವವನನ್ನು ಸೋಮವಾರ ಬಂಧನಕ್ಕೊಳಪಡಿಸಿದ್ದಾರೆ. 

ಬೆಂಗಳೂರು ಗ್ರಾಮಾಂತರ ರೈಲ್ವೆ ಠಾಣೆ ವ್ಯಾಪ್ತಿಯ ನಿಡವಂದ ಮತ್ತು ಹಿರೇಹಳ್ಳಿ ನಿಲ್ದಾಣಗಳ ನಡುವಿನ ಹಳಿ ಮೇಲೆ ಜುಲೈ 20ರಂದು ಮುಂಡ ಸಿಕ್ಕಿತ್ತು. ಗುರುತು ಪತ್ತೆಯಾಗಿರಲಿಲ್ಲ. 

ಮುಂಡದ ಫೋಟೊಗಳನ್ನು ಎಲ್ಲ ಠಾಣೆಗಳಿಗೆ ಕಳುಹಿಸಲಾಗಿತ್ತು. ಇದರ ನಡುವೆಯೇ ನಿಂಗಮ್ಮ ಅವರ ಮಗ ಸತೀಶ್, ತಾಯಿ ಕಾಣೆಯಾದ ಬಗ್ಗೆ ತುಮಕೂರು ಠಾಣೆಗೆ ಜುಲೈ 23ರಂದು ದೂರು ನೀಡಿದ್ದರು. ಹಳಿ ಮೇಲೆ ವೃದ್ಧೆಯೊಬ್ಬರ ಮುಂಡ ಸಿಕ್ಕಿರುವ ಕುರಿತು ಪೊಲೀಸರಿಂದ ಮಾಹಿತಿ ಸಿಗುತ್ತಿದ್ದಂತೆ ಮಗ ಸತೀಶ್, ತುಮಕೂರು ಜಿಲ್ಲಾ ಆಸ್ಪತ್ರೆಗೆ ಬಂದು ನೋಡಿದ್ದರು. ವೃದ್ಧೆಯ ಎಡಗೈಯಲ್ಲಿದ್ದ ಹಚ್ಚೆಗಳನ್ನು ಗುರುತಿಸಿದ್ದ ಮಗ, ತಮ್ಮ ತಾಯಿ (ನಿಂಗಮ್ಮ) ಅವರದ್ದೇ ಮುಂಡವೆಂದು ಹೇಳಿದ್ದರು.

ಇದೊಂದು ಅಸ್ವಾಭಾವಿಕ ಸಾವೆಂದು ಆರಂಭದಲ್ಲಿ ತಿಳಿಯಲಾಗಿತ್ತು. ಆದರೆ, ತಮಿಳುನಾಡಿನಿಂದ ಬೆಂಗಳೂರು ಮಾರ್ಗವಾಗಿ ಇಳಕಲ್‌ಗೆ ಗ್ರಾನೈಟ್‌ ಹೊತ್ತೊಯ್ದಿದ್ದ ಲಾರಿಯಲ್ಲಿ ರುಂಡ ಪತ್ತೆಯಾಗಿತ್ತು. ರುಂಡದ ಫೋಟೊ ಗಮಸಿದಾಗ, ನಿಂಗಮ್ಮ ಅವರದ್ದು ಎಂಬುದು ತಿಳಿಯಿತು. ಕೊಲೆ ಎಂಬುದು ಖಾತ್ರಿಯಾಗಿ ಪೊಲೀಸರು. ತನಿಖೆ ಚುರುಕುಗೊಳಿಸಿದ್ದರು. 

ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಲತಾ ಅವರ ದೊಡ್ಡ ಮಗ ಲತಾ ಎಂಬಾಕೆಯನ್ನು ವಿವಾಹವಾಗಿದ್ದರು. ಎರಡು ವರ್ಷಗಳ ಹಿಂದೆ ಲತಾಳ ಪತಿ ಮೃತಪಟ್ಟಿದ್ದರು. ತನಿಗೆ ವಯಸ್ಸಾಗಿದ್ದು, ಪುತ್ರನ ಪಿಂಚಣಿ ಹಣವನ್ನು ನನಗೆ ನೀಡಬೇಕೆಂದು ನಿಂಗಮ್ಮ ಸೊಸೆ ಬಳಿ ಒತ್ತಾಯ ಮಾಡಿದ್ದರು.

ಹಿರಿಯರ ಸಮ್ಮುಖದಲ್ಲಿ ರೂ.2 ಲಕ್ಷ ನೀಡಲು ಲತಾ ಒಪ್ಪಿದ್ದಳು. ಅದರಂತೆ ರೂ.50 ಸಾವಿರವನ್ನು ಲತಾ ತನ್ನ ಅತ್ತೆಗೆ ನೀಡಿದ್ದಳು. ಉಳಿದ ಹಣವನ್ನು ಕಂತಿನ ರೂಪದಲ್ಲಿ ಕೊಡುವುದಾಗಿ ಹೇಳಿದ್ದಳು. 

ಅಲ್ಲದೆ, ಲತಾ ಆರೋಪಿ ಬಾಲಚಂದ್ರನ ಜೊತೆಗೆ ಅನೈತಿಕ ಸಂಬಂಧವನ್ನೂ ಹೊಂದಿದ್ದಳು. ಈ ವಿಚಾರ ತಿಳಿದಿದ್ದ ನಿಂಗಮ್ಮ ಎಲ್ಲರ ಬಳಿ ಹೇಳಿಕೊಂಡು ಹೋಡಾಡುತ್ತಿದ್ದಳು ಎಂದು ಲತಾ ಆಕ್ರೋಶ ವ್ಯಕ್ತಪಡಿಸಿದ್ದಳು. ಅತ್ತೆಗೆ ಹಣ ನೀಡಬೇಕು. ಅಲ್ಲದೆ. ನಮ್ಮ ವಿಚಾರವನ್ನು ಇತರರಿಗೆ ಹೇಳುತ್ತಿರುವುದರಿಂದ ಅತ್ತೆಯನ್ನು ಹತ್ಯೆ ಮಾಡಲು ಲತಾ ಸಂಚು ರೂಪಿಸಿ ಬಾಲಚಂದ್ರನಿಗೆ ಹೇಳಿದ್ದಳು.

ಇದರಂತೆ ಪರಿಹಾರದ ಮೊತ್ತ ಕೊಡುವುದಾಗಿ ಹೇಳಿದ್ದ ಲತಾ, ನಿಂಗಮ್ಮ ಅವರನ್ನು ಜುಲೈ 19ರಂದು ತುಮಕೂರಿನಲ್ಲಿರುವ ಬಾಲಚಂದ್ರ ಮನೆಗೆ ಕಳುಹಿಸಿದ್ದಳು. ನಂತರ, ತಾನು ತವರು ಮನೆಯಾದ ಮಳವಳ್ಳಿಗೆ ಹೋಗಿದ್ದಳು. ಹಣ ಪಡೆಯಲು ಮನೆಗೆ ಬಂದ ವೃದ್ಧೆ ಮೇಲೆ ಹಲ್ಲೆ ಮಾಡಿದ್ದ ಬಾಲಚಂದ್ರ, ಹಗ್ಗದಿಂದ ಕತ್ತು ಬಿಗಿದು ಕೊಂದಿದ್ದ. ಮೃತದೇಹವನ್ನು ರೈಲು ಹಳಿ ಮೇಲೆ ಎಸೆದಿದ್ದ. ರೈಲು ಹರಿದು ರುಂಡ ಬೇರ್ಪಟ್ಟಿತ್ತು. ರುಂಡದಿಂದ ಗುರುತು ಸಿಗಬಹುದೆಂದು ತಿಳಿದ ಆರೋಪಿ,  ಅದೇ ರುಂಡವನ್ನು ಎತ್ತಿಕೊಂಡು ತುಮಕೂರು ಟೋಲ್‌ಗೇಟ್‌ ಬಳಿ ಹೋಗಿ ಲಾರಿಯೊಳಗೆ ಎಸೆದಿದ್ದ. ಅದೇ ಲಾರಿ ಇಳಕಲ್‌ಗೆ ಹೋಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಪ್ರಕರಣ ಸಂಬಂಧ ಆರೋಪಿ ಬಾಲಚಂದ್ರನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದು, ಪ್ರಿಯತಮೆ ಲತಾ ತಲೆಮರೆಸಿಕೊಂಡಿದ್ದು ಆಕೆ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. 

SCROLL FOR NEXT