ರಾಜ್ಯ

ಸಿಎಂ ಬೊಮ್ಮಾಯಿ ಇಂದು ದೆಹಲಿಗೆ: ಪ್ರಧಾನಿ ಮೋದಿ ಸೇರಿ ವರಿಷ್ಠರ ಭೇಟಿ, ಸಂಪುಟ ಬಗ್ಗೆ ಚರ್ಚೆ ಇಲ್ಲ

Manjula VN

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಬಸವರಾಜ ಬೊಮ್ಮಾಯಿಯವರು ಶುಕ್ರವಾರ ದೆಹಲಿಗೆ ತೆರಳಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿ ಕೇಂದ್ರದ ವಿವಿಧ ಸಚಿವರು ಹಾಗೂ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಲಿದ್ದಾರೆ. ಆದರೆ, ಈ ಭೇಟಿ ವೇಳೆ ಸಂಪುಟ ರಚನೆ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸುವುದಿಲ್ಲ, ಮುಂದಿನ ಬಾರಿ ತೆರಳಿದಾಗ ಚರ್ಚಿಸುತ್ತೇನೆಂದು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ತಿಳಿಸಿದ್ದಾರೆ. 

ಇಂದು ಬೆಳಿಗ್ಗೆ 6.10ಕ್ಕೆ ಬೆಂಗಳೂರಿನಿಂದ ದೆಹಲಿಗೆ ತೆರಳಿರುವ ಬೊಮ್ಮಾಯಿಯವರು ಶನಿವಾರ ವಾಪಸ್ಸಾಗಲಿದ್ದಾರೆಂದು ತಿಳಿದುಬಂದಿದೆ. 

ನಿನ್ನೆಯಷ್ಟೇ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿಯವರು, ಮುಖ್ಯಮಂತ್ರಿಯಾಗಿ ದೆಹಲಿಗೆ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದೇನೆ. ಈಗಾಗಲೇ ಪ್ರಧಾನಿ ಮೋದಿಯವರು ಕರೆ ಮಾಡಿ ಮಾತನಾಡಿದ್ದಾರೆ. ಒಳ್ಳೆಯ ಆಡಳಿತ ನೀಡುವಂತೆ ಶುಭ ಕೋರಿದ್ದಾರೆ. ದೆಹಲಿ ಭೇಟಿ ವೇಳೆ ಪ್ರಧಾನಿ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್, ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡುತ್ತೇನೆ. ಈ ವೇಳೆ ಪ್ರಧಾನಿ ಸೇರಿದಂತೆ ಹಿರಿಯರನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಿದ್ದೇನೆ. ಆದರೆ, ಸಂಪುಟ ರಚನೆ ಬಗ್ಗೆ ಚರ್ಚಿಸುವುದಿಲ್ಲ ಎಂದು ಹೇಳಿದರು. 

ಈ ವಿಚಾರವಾಗಿ 3-4 ದಿನಗಳ ಬಳಿಕ ಮತ್ತೆ ಸಮಯದ ಪಡೆದು ದೆಹಲಿಗೆ ತೆರಳುತ್ತೇನೆ. ಆಗ ಹೈಕಮಾಂಡ್ ಜೊತೆಗೆ ಚರ್ಚಿಸಿ ಸಂಪುಟ ರಚನೆ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಚಿವ ಸಂಪುಟಕ್ಕೆ ಸೇರ್ಪಡೆಗೊಳ್ಳುವುದಿಲ್ಲ ಎಂಬ ಜಗದೀಶ್ ಶೆಟ್ಟರ್ ಅವರ ಹೇಳಿಕೆ ಕುರಿತು ಮಾತನಾಡಿದ ಅವರು, ಶೆಟ್ಟರ್ ಅವರೊಂದಿಗೆ ವೈಯಕ್ತಿಕವಾಗಿ ಮಾತುಕತೆ ನಡೆಸಿ, ಅವರ ಭಾವನೆಗಳು, ಆಲೋಚನೆಗಳನ್ನು ಅರ್ಥ ಮಾಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. 

ಮಾಜಿ ಸಿಎಂ ಯಡಿಯೂರಪ್ಪ ಅವರು ಮಾತನಾಡಿ, ಸಂಪುಟ ರಚನೆ ಹಾಗೂ ರಾಜ್ಯದ ಆಡಳಿತ ವಿಚಾರದಲ್ಲಿ ನಾನು ಮಧ್ಯಪ್ರವೇಶಿಸುವುದಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಸಾಮರ್ಥ್ಯವಿದ್ದು, ಈ ಬಗ್ಗೆ ಅವರೇ ನಿರ್ಧರಿಸುತ್ತಾರೆ. ಯಾವುದೇ ಕೆಲಸಕ್ಕೂ ನನ್ನನ್ನು ಸಂಪರ್ಕಿಸಬೇಡಿ, ಇದೀಗ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದು, ಅವರನ್ನೇ ನೇರವಾಗಿ ಸಂಪರ್ಕಿಸಿ ಎಂದು ಬೆಂಬಲಿಗರಿಗೂ ತಿಳಿಸಿದ್ದೇನೆಂದು ಹೇಳಿದ್ದಾರೆ. 

ಇದೇ ವೇಳೆ ವಲಸಿಗ ನಾಯಕರ ಕುರಿತು ಮಾತನಾಡಿದ ಅವರು, ಈ ಕುರಿತು ಬೊಮ್ಮಾಯಿಯವರೊಂದಿಗೆ ಮಾತುಕತೆ ನಡೆಸುತ್ತೇನೆ. ಮಾತುಕತೆ ಬಳಿಕ ಬೊಮ್ಮಾಯಿಯವರು ನಿರ್ಧಾರ ಕೈಗೊಳ್ಳಲಿದ್ದಾರೆಂದು ತಿಳಿಸಿದ್ದಾರೆ. 

ಬಳಿಕ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಗೆ ಶುಕ್ರವಾರ ಭೇಟಿ ನೀಡುದ್ದೇನೆಂದು ತಿಳಿಸಿದ ಯಡಿಯೂರಪ್ಪ ಅವರು, ಈ ವೇಳೆ ಆತ್ಮಹತ್ಯೆ ಮಾಡಿಕೊಂಡ ರವಿ ಕುಟುಂಬವನ್ನು ಭೇಟಿ ಮಾಡುವುದಾಗಿ ಹೇಳಿದರು. 

ನೋವಿನಲ್ಲಿರುವ ಕುಟುಂಬಕ್ಕೆ ಸಂತಾಪ ಹೇಳುವುದು, ನನ್ನ ಜವಾಬ್ದಾರಿಯಾಗಿದೆ. ಅಧಿಕಾರ ಹಾಗೂ ಯಾವುದೇ ಸ್ಥಾನ ಇಲ್ಲದಿದ್ದರೂ ಉತ್ತಮ ಕೆಲಸಗಳನ್ನು ಮಾಡಬಹುದು ಎಂದು ಹೇಳಿದ್ದಾರೆ. 

ಈ ನಡುವೆ ದೆಹಲಿಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಬೊಮ್ಮಾಯಿಯವರು, ಕೇಂದ್ರ ಸಚಿವರು, ಕರ್ನಾಟಕದ ಸಂಸದರನ್ನು ಭೇಟಿ ಮಾಡಲಿದ್ದು, ಈ ವೇಳೆ ಬಾಕಿ ಉಳಿದುಕೊಂಡಿರುವ ಯೋಜನೆಗಳ ಕುರಿತು ಮಾತುಕತೆ ನಡೆಸಲಿದ್ದಾರೆಂದು ತಿಳಿದುಬಂದಿದೆ. 

SCROLL FOR NEXT