ರಾಜ್ಯ

ಗದಗ ಜಿಲ್ಲೆಯಲ್ಲಿ 'ಸಲ್ಮಾನ್ ಖಾನ್' ಗ್ರಾಮ ಕೇಳಿದ್ದೀರಾ? ಇಲ್ಲಿ ಮದುವೆಯಾಗಲು ಕ್ಯೂನಲ್ಲಿ ನಿಂತಿದ್ದಾರೆ ಯುವಕರು!

Sumana Upadhyaya

ಗದಗ:ಜಿಲ್ಲೆಯ ರೋಣ ತಾಲ್ಲೂಕಿನ ಸಣ್ಣ ಹಳ್ಳಿಯಿದು, ಈ ಹಳ್ಳಿ ಗದಗ ಪಟ್ಟಣದಿಂದ 59 ಕಿಲೋ ಮೀಟರ್ ದೂರದಲ್ಲಿದೆ. ಸಲ್ಮಾನ್ ಖಾನ್ ಗ್ರಾಮ ಎಂಬ ಹೆಸರು ಈ ಗ್ರಾಮಕ್ಕೆ ಬಂದಿದೆ, ಅರೆ ಬಾಲಿವುಡ್ ನಟ ಸಲ್ಮಾನ್ ಖಾನ್ ಗೂ ಈ ಗ್ರಾಮಕ್ಕೂ ಏನು ಸಂಬಂಧ ಎಂದುಕೊಂಡಿರಾ?

ಈ ಗ್ರಾಮದಲ್ಲಿ ಯಾರೂ ನಟರಿಲ್ಲ, ಬದಲಿಗೆ ಹಲವು ಯುವಕರು, ಪುರುಷರು ಮದುವೆಯಾಗಲು ಸೂಕ್ತ ಹೆಣ್ಣು ಸಿಗದೆ ಬ್ರಹ್ಮಚಾರಿಗಳಾಗಿಯೇ ಉಳಿದಿದ್ದಾರೆ. ಕಳೆದ 10 ವರ್ಷಗಳಿಂದ ಗ್ರಾಮದಲ್ಲಿ ಈ ಸಮಸ್ಯೆಯಿದ್ದು ಮದುವೆಯಾಗದೆ ಉಳಿದಿರುವವರು ಬಹುತೇಕರು ರೈತರಾಗಿದ್ದಾರೆ. ಈ ಗ್ರಾಮಕ್ಕೆ ಹೆಣ್ಣು ಕೊಡಲು ಯಾರೂ ಒಪ್ಪುತ್ತಿಲ್ಲವಂತೆ, ಹಳ್ಳಿ ಬೇರೆ ಅದಕ್ಕಿಂತ ಹೆಚ್ಚಾಗಿ ಪ್ರವಾಹ ಪೀಡಿತ ಪ್ರದೇಶ ಎಂದು. ಹೀಗಾಗಿ ಹೆಣ್ಣು ಸಿಗದೆ ಬೇಸತ್ತು ಮಾಜಿ ಸಚಿವ ಸಿ ಸಿ ಪಾಟೀಲ್ ಮತ್ತು ಸ್ಥಳೀಯ ಶಾಸಕರ ಮೊರೆ ಹೋಗಿದ್ದಾರೆ.

ಕೆಲ ವರ್ಷಗಳ ಹಿಂದೆ ಇಲ್ಲಿನ ಪ್ರವಾಹದಿಂದ ಭಾರೀ ಹಾನಿಗೀಡಾಗಿ ಸರ್ಕಾರದಿಂದ ಸುಮಾರು 500 ಮನೆಗಳನ್ನು ಕಟ್ಟಿ ಕೊಡಲಾಗಿತ್ತಾದರೂ ಪ್ರವಾಹದಿಂದ ಸಂಕಷ್ಟಕ್ಕೀಡಾದವರಿಗೆ ಅದರ ಫಲ ಸಿಕ್ಕಿಲ್ಲ. ಮದುವೆಯಾಗುವ ಯುವಕನಿಗೆ ಇರಲು ಸರಿಯಾದ ಮನೆಯಿಲ್ಲ, ಮನೆಯ ಕಿಟಕಿ-ಬಾಗಿಲುಗಳು ಸರಿಯಿಲ್ಲ ಎಂದು ಅನೇಕ ಹೆಣ್ಣು ಮಕ್ಕಳು ವಿವಾಹ ಪ್ರಸ್ತಾಪವನ್ನು ತಿರಸ್ಕರಿಸುತ್ತಿದ್ದಾರಂತೆ. 

ಇಲ್ಲಿನ ರೈತರಿಗೆ ಜಮೀನುಗಳಿವೆ. ಆದರೆ ಸತತ ಬರಗಾಲ ಮತ್ತು ನೆರೆಯಿಂದ ಸರಿಯಾಗಿ ಬೆಳೆ ಬೆಳೆಯಲು ಸಾಧ್ಯವಾಗದೆ ರೈತರು ಆರ್ಥಿಕ ಸಮಸ್ಯೆ ಹೊಂದಿದ್ದಾರೆ. ಕಳೆದ ಎರಡು ದಶಕಗಳಿಂದಲೂ ಇದೇ ರೀತಿಯಾಗುತ್ತಿದೆ.

ಗ್ರಾಮದ ಕೆಲವು ಶ್ರೀಮಂತ ಯುವಕರಿಗೂ ಹೆಣ್ಣು ಸಿಗುತ್ತಿಲ್ಲವಂತೆ. ಗ್ರಾಮದಲ್ಲಿನ ಬರಗಾಲ ಮತ್ತು ಪ್ರವಾಹ ಪರಿಸ್ಥಿತಿಯೇ ಇದಕ್ಕೆ ಮೂಲ ಕಾರಣ ಎನ್ನುತ್ತಾರೆ ಈ ಹಳ್ಳಿಗರು.

ಗ್ರಾಮದಲ್ಲಿ ಮದುವೆಯಾಗದೆ ಉಳಿದಿರುವ 30ರಿಂದ 40 ವರ್ಷದೊಳಗಿನ ಸುಮಾರು 120 ಪುರುಷರಿದ್ದಾರೆ. ಮನೆ ಕಟ್ಟಿಕೊಡಲು ನಾವು ಕಾಯುತ್ತಿದ್ದೇವೆ ಎಂದು ಕೆಲ ಯುವಕರು ಸರ್ಕಾರದತ್ತ ದೃಷ್ಟಿ ಹರಿಸಿದ್ದಾರೆ.

ಈ ಬಗ್ಗೆ ಜಿಲ್ಲಾಡಳಿತವನ್ನು ಕೇಳಿದರೆ, ಹೊಸ ಗ್ರಾಮವೊಂದು ಸಿದ್ದವಾಗುತ್ತಿದೆ. ಆರಂಭದಲ್ಲಿ ಕೆಲವು ಗ್ರಾಮಸ್ಥರು ಅಲ್ಲಿಗೆ ಹೋಗಲು ನಿರಾಕರಿಸಿದರು. ಹೀಗಾಗಿ ಆ ಪ್ರದೇಶ ಈಗ ಪೊದೆ, ಕಾಡುಗಳಿಂದ ತುಂಬಿ ಹೋಗಿದೆ. ಪ್ರದೇಶವನ್ನು ಸ್ವಚ್ಛಗೊಳಿಸಿ ಕೆಲವು ಮನೆಗಳನ್ನು ಕೂಡ ದುರಸ್ತಿಗೊಳಿಸಬೇಕಾಗಿದೆ ಎನ್ನುತ್ತಾರೆ.

SCROLL FOR NEXT