ರಾಜ್ಯ

ನಗರದಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕು: ಆತಂಕ ಬೇಡ ಎಂದ ಬಿಬಿಎಂಪಿ ಮುಖ್ಯ ಆಯುಕ್ತ

Manjula VN

ಬೆಂಗಳೂರು: ನಗರದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಜನರು ಆತಂಕಕ್ಕೊಳಗಾಗಬಾರದು. ಆದರೆ, ಹೆಚ್ಚು ಜಾಗರೂಕರಾಗಿರಬೇಕೆಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಗುರುವಾರ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳಲ್ಲಿ ವಾರ್ಡ್ ವಾರು ಗುರುತಿಸುತ್ತಿರುವ ಮೈಕ್ರೋ ಕಂಟೈನ್ಮೆಂಟ್ ವಲಯಗಳಿಂದ ಯಾರು ಸಹ ಆತಂಕ ಪಡುವ ಅಗತ್ಯವಿಲ್ಲ. ಮೂರು ಸೋಂಕಿತ ಪ್ರಕರಣಗಳು ಒಂದೇ ಕಡೆ ಪತ್ತೆಯಾದರೆ ಮೈಕ್ರೋ ಕಂಟೈನ್ಮೆಂಟ್ ವಲಯ ಮಾಡಲಾಗುತ್ತಿದೆ. ಈ ಮುಂಚೆ ಹತ್ತು ಕೇಸು ಒಂದೇ ಕಡೆ ಪತ್ತೆಯಾದರೆ, ಮೈಕ್ರೋ ಕಂಟೈನ್ಮೆಂಟ್ ವಲಯ ಮಾಡುತ್ತಿದ್ದೆವು. ಈ ವಲಯಗಳಿಂದ ಸೋಂಕು ಇತರರಿಗೆ ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಹೇಳಿದ್ದಾರೆ.

ಸೋಂಕು ಶಾಶ್ವತವಾಗಿ ದೂರಗೊಳಿಸಬೇಕಾದರೆ ಕೋವಿಡ್ ಮಾರ್ಗಸೂಚಿ, ಲಸಿಕೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಕೇರಳದಲ್ಲಿ ಮತ್ತೆ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಪರೀಕ್ಷೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. 

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ಸದ್ಯಕ್ಕೆ ಸಾಮಾನ್ಯ ಸ್ಥಿತಿಗೆ ತಲುಪಿಲ್ಲ. ಅನ್'ಲಾಕ್4.0 ಬೆನ್ನಲ್ಲೇ ನಿರೀಕ್ಷೆಗೂ ಮೀರಿ ಸೋಂಕು ಏರಿಕೆಯಾಗಿತ್ತಿದೆ. ನಗರದಲ್ಲಿ ಜನರು ಬೇಕಾಬಿಟ್ಟು ಓಡಾಡುತ್ತಿದ್ದು, ಮದುವೆ, ಹುಟ್ಟುಹಬ್ಬ, ಇತರೆ ಪಾರ್ಟಿಗಳನ್ನು ಆಯೋಜಿಸಿ ನಿಯಮ ಉಲ್ಲಂಘಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ನಿಯಮ ಪಾಲನೆ ಆಗದಿರುವ ಕಾರಣ ಸೋಂಕು ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 

SCROLL FOR NEXT