ರಾಜ್ಯ

ಕಾಡಾನೆ ಹೊಟ್ಟೆ ತುಂಬಿಸಲು ರಸ್ತೆ ಬದಿ ಹಲಸಿನ ಹಣ್ಣು ಸುರಿದ ಎಸ್ಟೇಟ್ ಮಾಲೀಕ: ಗ್ರಾಮಸ್ಥರಿಗೆ ಪ್ರಾಣ ಭಯ, ಹಲವರ ವಿರೋಧ!

Manjula VN

ಮಡಿಕೇರಿ: ಆಗಾಗ ಎಸ್ಟೇಟ್ ಒಳಗೆ ನುಗ್ಗಿ ದಾಂಧಲೆ ನಡೆಸುತ್ತಿದ್ದ ಕಾಡನೆ ದಾಳಿ ತಪ್ಪಿಸಲು ಎಸ್ಟೇಟ್ ಮಾಲೀಕನೊಬ್ಬ ರಸ್ತೆ ಬದಿಯಲ್ಲಿ ಹಲಸಿನ ಹಣ್ಣುಗಳನ್ನು ಸುರಿದಿದ್ದು, ಇದರಿಂದ ಭೀತಿಗೊಳಗಾಗಿರುವ ಗ್ರಾಮಸ್ಥರು, ಮಾಲೀಕನ ಈ ವರ್ತನೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಪ್ರತೀ ವರ್ಷ ಹಲಸಿನ ಹಣ್ಣಿನ ಸೀಸನ್ ಆರಂಭವಾಗುತ್ತಿದ್ದಂತೆಯೇ ವಾಸನಿ ಹಿಡಿದು ಕಾಡಾನೆಗಳು ಎಸ್ಟೇಟ್ ಒಳಗೆ ಪ್ರವೇಶ ಮಾಡಿ ಬೆಳೆಗಳನ್ನು ನಾಶ ಮಾಡುತ್ತಿವೆ. ಹೀಗಾಗಿ ಇದನ್ನು ನಿಯಂತ್ರಿಸುವ ಸಲುವಾಗಿ ಮೊದಲೇ ಹಲಸಿನ ಹಣ್ಣುಗಳನ್ನು ಕಿತ್ತು ಕಾಡಾನೆಗಳು ಎಸ್ಟೇಟ್ ಪ್ರವೇಶಿಸುವ ರಸ್ತೆ ಬದಿ ಸುರಿದಿದ್ದೇನೆ. ಇದರಿಂದ ಕಾಡಾನೆ ಎಸ್ಟೇಟ್ ಪ್ರವೇಶಿಸುವುದಿಲ್ಲ ಎಂದು ಕೊಡಗು ಜಿಲ್ಲೆಯ ಅಬ್ಯತ್ ಮಂಗಲ ಎಸ್ಟೇಟ್ ಮಾಲೀಕ ಡಿಹೆಯ್ ಅಜಿತ್ ಕುಮಾರ್ ಹೇಳಿದ್ದಾರೆ. 

ಆದರೆ, ಇದಕ್ಕೆ ಭೀತಿಗೊಳಗಾಗಿರುವ ಗ್ರಾಮಸ್ಥರು, ಮಾಲೀಕನ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಲಸಿನ ಹಣ್ಣುಗಳು ರಸ್ತೆ ಬದಿಯಲ್ಲಿರುವುದರಿಂದ ಆನೆಗಳು ರಸ್ತೆಗಳಲ್ಲಿ ನಿಂತುಕೊಳ್ಳಲಿದ್ದು, ಇದರಿಂದ ಗ್ರಾಮಸ್ಥರ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿರುತ್ತವೆ ಎಂದು ಗ್ರಾಮಸ್ಥರು ಹೇಳಿದ್ದಾರೆ. 

ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಎಸ್ಟೇಟ್ ಮಾಲೀಕ, ಕಾಡಾನೆಗಳು ಎಂದಿನಂತೆ ಎಸ್ಟೇಟ್ ಪ್ರವೇಶಿಸುವ ಜಾಗದಲ್ಲಿ ಹಣ್ಣುಗಳನ್ನು ಇರಿಸಲಾಗಿದೆ. ಮುಂದಿನ ಬಾರಿ ಕಾಡಿನ ಅಂಚಿನಲ್ಲೇ ಇರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

SCROLL FOR NEXT