ರಾಜ್ಯ

ಹಸಿರುಯುಕ್ತ ಬೆಂಗಳೂರು: ನಗರದಾದ್ಯಂತ ಮೂರು ಟ್ರೀಪಾರ್ಕ್ ಶೀಘ್ರವೇ ಬಳಕೆಗೆ ಮುಕ್ತ

Srinivas Rao BV

ಬೆಂಗಳೂರು: ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ಬೆಂಗಳೂರಿರು ಸಂತಸಪಡುವ ಸುದ್ದಿಯೊಂದಿದೆ. ಗಾರ್ಡನ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರು ನಗರದಲ್ಲಿ ಮೂರು ಟ್ರ‍ೀ ಪಾರ್ಕ್ ಶೀಘ್ರವೇ ಸಾರ್ವಜನಿಕ ಬಳಕೆಗೆ ಮುಕ್ತವಾಗಲು ಸಜ್ಜುಗೊಂಡಿದೆ. 

ಕಬ್ಬನ್ ಪಾರ್ಕ್ ಹಾಗೂ ಲಾಲ್ ಬಾಗ್ ಗಳ ಮಾದರಿಯಲ್ಲಿ, ಅಭಿವೃದ್ಧಿಪಡಿಸಲಾಗಿರುವ ಈ ಟ್ರೀ ಪಾರ್ಕ್ ಅಥವಾ ಗ್ರೀನ್ ಝೋನ್ ಗಳನ್ನು ಲಾಕ್ ಡೌನ್ ನಂತರ ಸಾರ್ವಜನಿಕ ಪ್ರವೇಶಕ್ಕೆ ಮುಕ್ತ ಮಾಡಲಾಗುತ್ತದೆ. 

ಈ ವರ್ಷಾರಂಭದಲ್ಲಿ ಸಿಎಂ ಯಡಿಯೂರಪ್ಪ, ದಕ್ಷಿಣದಲ್ಲಿ ತುರಹಳ್ಳಿ (400 ಎಕರೆ), ಪೂರ್ವದಲ್ಲಿ ಕಾಡುಗೋಡಿ (102 ಎಕರೆ)  ಮಾಚೋಹಳ್ಳಿ (98 ಎಕರೆ) ಪ್ರದೇಶಗಳಲ್ಲಿ ಪರಿಸರ ಪಾರ್ಕ್ ಗಳನ್ನು ಜೂನ್ ವೇಳೆಗೆ ಸ್ಥಾಪಿಸುವುದಾಗಿ ಘೋಷಿಸಿದ್ದರು.  ಸರ್ಕಾರ ಪಾರ್ಕ್ ಅಭಿವೃದ್ಧಿಪಡಿಸುವುದಕ್ಕಾಗಿ ಕಾಮಗಾರಿ ಪ್ರಾರಂಭಿಸಿತ್ತಾದರೂ ಕೋವಿಡ್-19 ಬಿಕ್ಕಟ್ಟು ಹಾಗೂ ಲಾಕ್ ಡೌನ್ ಗಳಿಂದಾಗಿ ಕಾಮಗಾರಿ ವಿಳಂಬವಾಗಿತ್ತು. ಈಗ ಪರಿಸ್ಥಿತಿ ಸುಧಾರಿಸಿದ ನಂತರ ಕೆಲಸವನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದ್ದಾರೆ. 

ಬೆಂಗಳೂರು ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಎಸ್ಎಸ್ ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದು, ತುರಹಳ್ಳಿಯಲ್ಲಿ ಹಾಗೂ ಕಾಡುಗೋಡಿಯಲ್ಲಿರುವ ಈಗಿರುವ 24.7ಎಕರೆಗಳಷ್ಟು ಟ್ರೀಪಾರ್ಕ್ ಗಳನ್ನು ಅಭಿವೃದ್ಧಿಪಡಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ಎರಡೂ ಟ್ರೀಪಾರ್ಕ್ ಗಳನ್ನು ಶೀಘ್ರವೇ  ಲೋಕಾರ್ಪಣೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದು, 94 ಎಕರೆಗಳಷ್ಟು ಪ್ರದೇಶದಲ್ಲಿರುವ ಮಾಚೋಹಳ್ಳಿ ಟ್ರ‍ೀ ಪಾರ್ಕ್ ಇನ್ನೂ ಅಭಿವೃದ್ಧಿಯಾಗಬೇಕಿದೆ. ಎರಡು ಮೂರು ವರ್ಷಗಳ ಹಿಂದೆಯೇ ಸಸಿಗಳನ್ನು ನೆಡಲಾಗಿತ್ತು, ಕಾಮಗಾರಿಯನ್ನು ಕೆಲವು ವಾರಗಳ ಹಿಂದೆಯಷ್ಟೇ ಕೈಗೊಳ್ಳಲಾಯಿತು ಎಂದು ಹೇಳಿದ್ದಾರೆ. 

ಪಾರ್ಕ್ ಗಳಲ್ಲಿ ಕುಡಿಯುವ ನೀರು, ಶೌಚಾಲಯ, ವಾಕಿಂಗ್ ಟ್ರಾಕ್ ಗಳು, ಬೆಂಚ್ ಗಳ ವ್ಯವಸ್ಥೆ ಮಾಡಲಾಗಿದೆ. ಅರಣ್ಯ ಇಲಾಖೆ ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಎನ್ ಜಿಒಗಳೊಂದಿಗೆ ಕೈ ಜೋಡಿಸಿದೆ. ಕಾಡುಗೋಡಿಯಲ್ಲಿ ಪಾರ್ಕ್ ನಲ್ಲಿ  34 ಪ್ರಮುಖ ಜಾತಿಗಳ 8,000 ಮರಗಳಿವೆ, ತುರೇಹಳ್ಳಿ ಅರಣ್ಯದಲ್ಲಿ  10,000 ಮರಗಳಿವೆ ಮಾಚೋಹಳ್ಳಿಯಲ್ಲಿಯಲ್ಲಿ 6,000 ಮರಗಳಿದ್ದು, ಸ್ಮಾರ್ಟ್ ಫೋನ್ ಮೂಲಕ ಸ್ಕ್ಯಾನ್ ಮಾಡಿದರೆ ಮರಗಳ ವಿವರ ಪಡೆಯಲು ಅವಕಾಶವಿರುವುದು ಟ್ರೀ ಪಾರ್ಕ್ ನ ಮತ್ತೊಂದು ವಿಶೇಷವಾಗಿದೆ ಎಂದು ರವಿಶಂಕರ್ ವಿವರಿಸಿದ್ದಾರೆ.

SCROLL FOR NEXT