ರಾಜ್ಯ

ನಗರದಲ್ಲಿ ವರುಣನ ಆರ್ಭಟ: ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ನೀರು, ಪಾಲಿಕೆ ಅಧಿಕಾರಿಗಳಿಗೆ ಜನರ ಹಿಡಿಶಾಪ!

Manjula VN

ಬೆಂಗಳೂರು: ನಗರದಲ್ಲಿ ಶುಕ್ರವಾರವೂ ಗುಡುಗು, ಗಾಳಿ ಸಹಿತ ಧಾರಾಕಾರ ಮಳೆ ಸುರಿದಿದ್ದು, ಭಾರೀ ಮಳೆ ಹಿನ್ನೆಲೆಯಲ್ಲಿ ತಗ್ಗುಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿ ಅವಾಂತರಗಳು ಸೃಷ್ಟಿಯಾಗಿತ್ತು. 

ಮಾನ್ಸೂನ್ ಆರಂಭವಾಗುವುದಕ್ಕೂ ಮುನ್ನ ಈ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಈ ವೇಳೆ ಮುಂಗಾರು ಆರಂಭವಾಗುವುದಕ್ಕೂ ಮುನ್ನ ಮಳೆಗಾಲದಲ್ಲಿ ಎದುರಾಗುವ ಸಮಸ್ಯೆ ಎದುರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದರು. 

ಮುಖ್ಯಮಂತ್ರಿಗಳ ಸೂಚನೆ ನಡುವೆಯೂ ಬಿಬಿಎಂಪಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದೇ ಇರುವುದು ಕಂಡು ಬಂದಿದೆ. 

ನಗರದಲ್ಲಿ ನಿನ್ನೆ ಬೆಳಿಗ್ಗೆಯಿಂದಲೇ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. ಮಧ್ಯಾಹ್ನದ ಬಳಿಕ ಶುರುವಾದ ಮಳೆ ಕೆಲ ಕಾಲ ಜೋರಾಗಿಯೇ ಅಬ್ಬರಿಸಿತು. ಇದರಿಂದ ಜೆ.ಪಿ.ನಗರ 6ನೇ ಹಂತದ ಕೆಲವು ರಸ್ತೆಗಳ ಮೇಲೆ ಒಳಚರಂಡಿ ನೀರು ಉಕ್ಕಿ ಹರಿದಿದ್ದು, ತಗ್ಗುಪ್ರದೇಶಗಳಿದ್ದ ಮನೆಗಳಿಗೆ ನುಗ್ಗಿದ ಘಟನೆಗಳು ನಡೆದಿವೆ. 

ಕೆಎಸ್ಎನ್'ಡಿಎಂಸಿ ಸಾರಕ್ಕಿ ನಿರ್ವಹಣೆ ಮಾಡುತ್ತಿರುವ ರೇನ್ ಗೇಜ್ ನಲ್ಲಿ ಕೇವಲ ಅರ್ಧಗಂಟೆಗಳಲ್ಲಿ 62.5 ಎಂಎಂ ಮಳೆಯಾಗಿತ್ತು. ರಸ್ತೆಗಳಿಗೆ ನೀರು ತುಂಬಿದ್ದಷ್ಟೇ ಅಲ್ಲದೆ, 10-15 ಮನೆಗಳಿಗೆ ನೀರು ನುಗ್ಗಿತ್ತು. ಸಾರಕ್ಕಿ ಕೆರೆ ಕೂಡ ತುಂಬಿ ಹರಿದಿತ್ತು. ಕೆರೆಯಲ್ಲಿ ನೀರು ತುಂಬಿದ್ದ ಕಾರಣ ಅವಾಂತರ ಸೃಷ್ಟಿಯಾಗಿತ್ತು. ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗಲಿಲ್ಲ. ಇದರಿಂದ ಮೂರು ಪ್ರದೇಶಗಳ ಮೇಲೂ ಪರಿಣಾಮ ಬೀರಿತು ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ. 

ಜೆಪಿ ನಗರ 6ನೇ ಹಂತ ಹಾಗೂ ಸುತ್ತಮುತ್ತಲಿನ ಪ್ರದೇಶಗಲ್ಲಿ ಈ ಮಟ್ಟದಲ್ಲಿ ನೀರು ತುಂಬುತ್ತಿರಲಿಲ್ಲ. ರಸ್ತೆಗಳಿಗೆ ನೀರು ಬರುತ್ತಿದ್ದರೂ, ಮನೆಗಳಿಗೆ ನುಗ್ಗುತ್ತಿರಲಿಲ್ಲ. ಇದೇ ಮೊದಲ ಬಾರಿಗೆ ಈ ರೀತಿಯಾಗಿದೆ. ಸರ್ಕಾರ ಮೊದಲೇ ಸಿದ್ಧತೆ ನಡೆಸಬೇಕಿತ್ತು ಎಂದು ಜೆಪಿ ನಗರದ ನಿವಾಸಿಯೊಬ್ಬರು ಹೇಳಿದ್ದಾರೆ. 

ಚರಂಡಿ ನೀರಿನ ಬಿಬಿಎಂಪಿ ಉಸ್ತುವಾರಿ ಅಧಿಕಾರಿ ಮಾತನಾಡಿ, ಚರಂಡಿಗಳು 40-45 ಮಿಮೀವರೆಗಿನ ಮಳೆ ನೀರನ್ನು ನಿಭಾಯಿಸಬಲ್ಲವು. ಆದರೆ, ನಿನ್ನೆ ಕೇವಲ ಅರ್ಧಗಂಟೆಯಲ್ಲಿ 62.5 ಎಂಎಂ ಮಳೆಯಾಗಿದೆ. ಹೀಗಾಗಿ ಚರಂಡಿಗಳು ಚಿಕ್ಕದಾಗಿದ್ದರಿಂದ ಮನೆಗಳಿಗೆ ನೀರು ನುಗ್ಗಿದೆ ಎಂದು ತಿಳಿಸಿದ್ದಾರೆ. 

ನಾವು ಸುತ್ತಮುತ್ತಲಿನ ಅಪಾರ್ಟ್ಮೆಂಟ್ ಸಂಕೀರ್ಣದ ಮೂಲಕ ಒಳ ಚರಂಡಿ ನಿರ್ಮಿಸಲು ಪ್ರಯತ್ನಿಸುತ್ತಿದ್ದೇವೆ, ಆದರೆ ನಿವಾಸಿಗಳ ಸಂಘ ಇದಕ್ಕೆ ಒಪ್ಪಿಗೆ ನೀಡುತ್ತಿಲ್ಲ ಎಂದಿದ್ದಾರೆ. 

ಗಿರಿನಗರ, ಮಹಾಲಕ್ಷ್ಮಿ ಲೇ ಔಟ್, ಎಚ್‌ಎಎಲ್ ವಿಮಾನ ನಿಲ್ದಾಣದಲ್ಲೂ ಇದೇ ರೀತಿಯ ಘಟನೆಗಳು ನಡೆದಿರುವುದು ವರದಿಯಾಗಿದೆ. 

ಈ ನಡುವೆ ಜೆಪಿ ನಗರ ಹಂತ I, ಜಯನಗರ 5 ನೇ ಬ್ಲಾಕ್, ಬಿಇಎಲ್ ಸರ್ಕಲ್ ರಿಂಗ್ ರಸ್ತೆ ಮತ್ತು ಲಗ್ಗರೆ ರಿಂಗ್ ರಸ್ತೆಗಳಲ್ಲಿ ಮರ ಬಿದ್ದ ಪ್ರಕರಣಗಳು ವರದಿಯಾಗಿವೆ.

SCROLL FOR NEXT