ರಾಜ್ಯ

'ವರ್ಗಾವಣೆಯನ್ನು ನಿರೀಕ್ಷಿಸಿರಲಿಲ್ಲ, ಮೈಸೂರು ಜನತೆ ನನಗೆ ತವರುಮನೆ ಪ್ರೀತಿ ತೋರಿಸಿದ್ದಾರೆ': ರೋಹಿಣಿ ಸಿಂಧೂರಿ

Sumana Upadhyaya

ಮೈಸೂರು: ಕಳೆದ ಕೆಲವು ದಿನಗಳಿಂದ ಮೈಸೂರಿನಲ್ಲಿ ನಡೆದಿರುವ ಬೆಳವಣಿಗೆಗಳು ಎಲ್ಲರ ಮುಂದೆ ನಡೆದಿದೆ, ಹಾಗಾಗಿ ಈ ಬಗ್ಗೆ ಪ್ರತ್ಯೇಕವಾಗಿ ನಾನು ಹೇಳಿಕೆ ನೀಡುವ, ಮಾತನಾಡುವ ಅಗತ್ಯವಿಲ್ಲ, ಈ ಬೆಳವಣಿಗೆ ನಡೆಯಬಾರದಿತ್ತು, ಹೀಗೆ ಯಾವ ಜಿಲ್ಲೆಯಲ್ಲಿ, ಸಂಸ್ಥೆಯಲ್ಲಿ ನಡೆದರೂ ಸಂಸ್ಥೆ ನಡೆಸುವುದು ಕಷ್ಟವಾಗುತ್ತದೆ, ಆದರೆ ನನಗೆ ಶಿಲ್ಪಾ ನಾಗ್ ಅವರ ಹತಾಶೆ, ಅಭದ್ರತೆ ಬಗ್ಗೆ  ಅನುಕಂಪವಿದೆ ಎಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪ್ರತಿಕ್ರಿಯಿಸಿದ್ದಾರೆ.

ಇಂದು ಮೈಸೂರಿನಿಂದ ತಮ್ಮ ನೂತನ ಹುದ್ದೆಗೆ ಅಧಿಕಾರ ವಹಿಸಿಕೊಳ್ಳಲು ತೆರಳುವ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು ಪ್ರತಿಕ್ರಿಯೆ ಕೇಳಿದಾಗ ಮಾತನಾಡಿದ ಅವರು, ಈಗ ಜನರಿಗೆ ಬೇಕಿರುವುದು ಕೋವಿಡ್ ನಿರ್ವಹಣೆ, ಅದು ಆಗಲಿ ಎಂದು ಆಶಿಸುತ್ತೇನೆ ಎಂದರು.

ಇತ್ತೀಚೆಗೆ ಮೈಸೂರಿನಲ್ಲಿ ಹಠಾತ್ತಾಗಿ ಬೆಳವಣಿಗೆಗಳು ನಡೆದಿವೆ, ಇದನ್ನು ನಾವು ನಿರೀಕ್ಷೆ ಮಾಡಿರಲಿಲ್ಲ, ಆಗಿಹೋಗಿದೆ, ತವರಮನೆಯಿಂದ ತೆರಳುವ ಮಗಳ ಭಾವನೆಯಲ್ಲಿ ಮೈಸೂರಿನಿಂದ ನಿರ್ಗಮಿಸುತ್ತಿದ್ದೇನೆ ಎಂದರು.

ನನಗೆ ಮೈಸೂರು ಜನತೆ ಪ್ರೀತಿ ತೋರಿಸಿದ್ದಾರೆ, ಮೈಸೂರು ನನಗೆ ತಾಯಿಮನೆಯ ಭಾವನೆ ನೀಡಿದೆ, ನೂತನ ಜಿಲ್ಲಾಧಿಕಾರಿಗಳಿಗೆ ಶುಭವಾಗಲಿ, ಹೊಸ ಜಿಲ್ಲಾಧಿಕಾರಿಗಳಿಗೆ ಶುಭಾಶಯ ತಿಳಿಸಲು, ಇಲ್ಲಿನ ವಸ್ತುಸ್ಥಿತಿ ತಿಳಿಸಲು ನಾನು ಇಲ್ಲಿಗೆ ಬಂದಿದ್ದೇನೆ. ನಿನ್ನೆ ವರ್ಗಾವಣೆಯಾದ ನಂತರವೂ ಸಾಕಷ್ಟು ಜನರು ನನಗೆ ಪ್ರೀತಿ, ವಿಶ್ವಾಸ ತೋರಿಸಿದ್ದಾರೆ, ಅವರಿಗೂ ನಾನು ಧನ್ಯವಾದಗಳನ್ನು ಹೇಳುತ್ತೇನೆ, ಮಗಳಾಗಿ ನಾನು ಎಲ್ಲಾ ಮೈಸೂರು ಜನತೆಗೆ ಧನ್ಯವಾದಗಳನ್ನು ಹೇಳುತ್ತೇನೆ ಎಂದರು.

ಹಠಾತ್ ಬೆಳವಣಿಗೆಯಲ್ಲಿ ಸರ್ಕಾರ ರೋಹಿಣಿ ಸಿಂಧೂರಿಯವರನ್ನು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾಗಿ ಹಾಗೂ ಶಿಲ್ಪಾ ನಾಗ್ ಅವರನ್ನು ಗ್ರಾಮೀಣಾಭಿವೃದ್ಧಿ ಇಲಾಖೆಯ ನಿರ್ದೇಶಕರಾಗಿ ವರ್ಗಾವಣೆ ಮಾಡಿದೆ. 

SCROLL FOR NEXT