ರಾಜ್ಯ

ಬೆಂಗಳೂರು: ವೀರ್ಯ ತಿಮಿಂಗಲದ ಅಂಬರ್ ಗ್ರೀಸ್ ಮಾರಾಟ-ನಾಲ್ವರ ಬಂಧನ

Raghavendra Adiga

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ವೀರ್ಯ ತಿಮಿಂಗಲದ ಅಂಬರ್ ಗ್ರೀಸ್ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಸೈಯದ್ ತಜ್ಮುಲ್ (54), ಸಲೀಂ ಪಾಷಾ (48), ರಫೀ ಉಲ್ಲಾ ಶರೀಫ್ (45) ಹಾಗೂ ನಾಸೀರ್ ಪಾಷಾ (34) ಬಂಧಿತ ಆರೋಪಿಗಳು.

ಬಂಧಿತರಿಂದ ಅಂದಾಜು 8 ಕೋಟಿ ರೂ ಬೆಲೆಬಾಳುವ 6ಕೆಜಿ 700 ಗ್ರಾಂ ತೂಕದ ವೀರ್ಯ ತಿಮಿಂಗಲದ ಅಂಬರ್ ಗ್ರೀಸ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಡುಗೊಂಡನಹಳ್ಳಿ ಠಾಣಾ ವ್ಯಾಪ್ತಿಯ ಎಂಆರ್ ಕೆ ಟಂಟ್ ಹೌಸ್ ಹಿಂಭಾಗ ಲಕ್ಷ್ಮೀ ಪತಿ ಗಾರ್ಡನ್ ಬಳಿ ಅಪರಿಚಿತ ವ್ಯಕ್ತಿಗಳು ಮಾದಕ ವಸ್ತುಗೆ ಸಂಬಂಧಿಸಿದ ವಸ್ತು ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೋಲಾರ ಮೂಲದ ಸಲ್ಮಾನ್ ಎಂಬಾತನಿಂದ ಅಂಬರ್ ಗ್ರೀಸ್ ಪಡೆದಿದ್ದು, ಇದನ್ನು ಮಾರಾಟ ಮಾಡಿದರೇ ಸಮನಾಗಿ ಹಣವನ್ನು ಹಂಚಿಕೊಳ್ಳೋಣ ಎಂದು ಆತ ತಿಳಿಸಿದ್ದ. ಹೀಗಾಗಿ ಸೈಯದ್ ಮತ್ತು ಸಲೀಂ ಅಂಬರ್ ಗ್ರೀಸ್ ವಸ್ತು ಪಡೆದು ವ್ಯಾಪಾರಕ್ಕೆ ಮುಂದಾಗಿದ್ದಾಗ ತಮ್ಮನ್ನು ಬಂಧಿಸಲಾಗಿದೆ ಎಂದು ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಅಂಬರ್ ಗ್ರೀಸ್ ಎಂಬುದು ವೀರ್ಯ ತಿಮಿಂಗಿಲದಿಂದ ಪಡೆದ ಘನ ಮೇಣದ ವಾಸನೆಯ ವಸ್ತುವಾಗಿದ್ದು, ಇದನ್ನು ಸುಗಂಧ ದ್ರವ್ಯ ಹಾಗೂ ಔಷಧಿ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಅರಬ್, ಚೀನಾ ಸೇರಿ ಪಾಶ್ಚಾತ್ಯ ದೇಶಗಳಲ್ಲಿ ಇದಕ್ಕೆ ಬಹು ಬೇಡಿಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಕಾಡುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಕಾಡುಗೊಂಡನಹಳ್ಳಿ ಸಹಾಯಕ ಪೊಲೀಸ್ ಆಯುಕ್ತ ಜಗದೀಶ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

ತನಿಖಾ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು 1 ಲಕ್ಷ ರೂ ನಗದು ಬಹುಮಾನ ಘೋಷಿಸಿದ್ದಾರೆ.

SCROLL FOR NEXT