ರಾಜ್ಯ

'ರೋಹಿಣಿ ಸಿಂಧೂರಿಯವರನ್ನು ವರ್ಗಾವಣೆ ಮಾಡುವ ಬದಲು ಸರ್ಕಾರ ಅಮಾನತು ಮಾಡಬೇಕಿತ್ತು': ಶಾಸಕ ಸಾ.ರಾ. ಮಹೇಶ್ 

Sumana Upadhyaya

ಮೈಸೂರು: ಇಬ್ಬರು ಮಹಿಳಾ ಐಎಎಸ್ ಅಧಿಕಾರಿಗಳ ಬಹಿರಂಗ ಕಿತ್ತಾಟದ ನಂತರ ಅವರನ್ನು ವರ್ಗಾವಣೆ ಮಾಡಿದರೂ ಹಿಂದಿನ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರ ಮೇಲೆ ಆರೋಪಗಳು ನಿಲ್ಲುತ್ತಲೇ ಇಲ್ಲ.

ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಮತ್ತೆ ಅಧಿಕಾರಿ ರೋಹಿಣಿ ಸಿಂಧೂರಿಯವರ ಮೇಲೆ ಆಪಾದನೆಗಳ ಸುರಿಮಳೆಗೈದಿದ್ದಾರೆ. ಸರ್ಕಾರ ಅವರನ್ನು ವರ್ಗಾವಣೆ ಮಾಡುವ ಬದಲು ಸೇವೆಯಿಂದ ಅಮಾನತು ಮಾಡಬೇಕಿತ್ತು ಎಂದು ಹೇಳಿದ್ದಾರೆ.

ರೋಹಿಣಿ ಸಿಂಧೂರಿಯವರ ವಿರುದ್ಧ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು ಅದರಲ್ಲಿ 10 ಅಂಶಗಳನ್ನು ಉಲ್ಲೇಖಿಸಿದ್ದಾರೆ. ಮಾತಿನಲ್ಲಿಯೇ ಸಿಂಧೂರಿ ವಿರುದ್ಧ ಛಾಟಿ ಬೀಸಿದ ಸಾ ರಾ ಮಹೇಶ್, ದಿ ಗ್ರೇಟ್ ಸಿಂಗಂ, ದಕ್ಷ ಅಧಿಕಾರಿಯಂತೆ ರೋಹಿಣಿಯವರು,ಅದೇನು ಸಿಂಗವೋ, ಸಿಂಗಳೀಕನೋ ಅವರ ಮನೆಯ ಕರೆಂಟ್ ಬಿಲ್ ತಿಂಗಳಿಗೆ 50 ಸಾವಿರ ರೂಪಾಯಿ, ಯಾವ ಮಂತ್ರಿ ಮನೆಗೂ ಇಷ್ಟು ಬರಲ್ಲ, ಒಬ್ಬ ಸೆಕೆಂಡ್ ಕ್ಲಾಸ್ ಅಧಿಕಾರಿಯ ವೇತನ 50 ಸಾವಿರ ರೂಪಾಯಿ, ಜನ ಇಂದು ಆರ್ಥಿಕ ಸಂಕಷ್ಟದಿಂದ ಸಾಯುತ್ತಿದ್ದಾರೆ, ಅಂತಹುದರಲ್ಲಿ ಇವರಿಗೆ ಮೋಜು ಮಸ್ತಿ ಎಂದು ಆರೋಪಿಸಿದರು.

ರೋಹಿಣಿ ಸಿಂಧೂರಿಯವರು ಜಿಲ್ಲಾಧಿಕಾರಿ ನಿವಾಸದಲ್ಲಿ ಪಾರಂಪರಿಕ ಕಟ್ಟಡ ಆವರಣದಲ್ಲಿ 16 ಲಕ್ಷ ರೂಪಾಯಿ ವೆಚ್ಚದಲ್ಲಿ ಈಜುಕೊಳ, ಜಿಮ್ ನಿರ್ಮಿಸಿಕೊಂಡಿದ್ದಾರೆ. ಈಜುಕೊಳಕ್ಕೆ ಕುಡಿಯುವ ನೀರು ಬಳಕೆ ಮಾಡಿದ್ದಾರೆ. ಜಿಲ್ಲಾಧಿಕಾರಿ ಮನೆಯಲ್ಲಿ ಮೂರು ಕೆಇಬಿ ಮೀಟರ್ ಇವೆ, ಪಂಪ್ ಸೆಟ್ ಗೆ ಎಷ್ಟು ಗಂಟೆ ಕರೆಂಟ್ ಕೊಡುತ್ತಿದ್ದೀರಿ ಹೇಳಿ, ಇದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಅಲ್ಲವೇ ಎಂದು ಪ್ರಶ್ನಿಸಿದರು.

ಈಜುಕೊಳ ಪೈಲಟ್ ಪ್ರಾಜೆಕ್ಟ್ ಎಂದು ರೋಹಿಣಿ ಸಿಂಧೂರಿ ಸಮರ್ಥನೆ ಕೊಟ್ಟಿದ್ದಾರಲ್ಲವೇ ಎಂದು ಕೇಳಿದಾಗ, ಈಜುಕೊಳವನ್ನು ಹಿಂದುಳಿದ ಪ್ರದೇಶಗಳಲ್ಲಿ ಕಟ್ಟಿಸಬೇಕಾಗಿತ್ತು, ಮನೆಯಲ್ಲಿ ಏಕೆ ಕಟ್ಟಿಸಿಕೊಂಡಿರಿ, ನೀವು ಆದರ್ಶವಾಗಿದ್ದರೆ ಆಶ್ರಯ ಮನೆ ಕಟ್ಟಿಸಿಕೊಂಡು ವಾಸ ಮಾಡಿ, ಮಾದರಿ ಶೌಚಾಲಯ ಕಟ್ಟಿಸಿ ಬಳಸಿ, ರೈತರಿಗೇ ವಿದ್ಯುತ್ ಸಿಗುತ್ತಿಲ್ಲ, ಅಂತಹುದರಲ್ಲಿ ಇಲ್ಲಿ ಪೋಲು ಮಾಡುತ್ತಿದ್ದೀರಿ ಎಂದು ಕಿಡಿಕಾರಿದರು.

ನಾನೂ ಸಿನೆಮಾ ಮಾಡುತ್ತೇನೆ: ರೋಹಿಣಿ ಸಿಂಧೂರಿ ಬಗ್ಗೆ ಸಿನೆಮಾ ಮಾಡುತ್ತಾರಂತೆ. ನಾನು ಮಾಡುತ್ತೇನೆ, 2015ರಲ್ಲಿ ಬಡತನದಿಂದ ಮೇಲೆ ಬಂದು ಐಎಎಸ್ ಅಧಿಕಾರಿಯಾಗಿದ್ದ ನಂತರ ಆಂಧ್ರಪ್ರದೇಶ ಅಧಿಕಾರಿ ಜೊತೆ ಅವರ ಸಂಪರ್ಕ, ಸಾವು ಬಗ್ಗೆ ಸಿನೆಮಾ ಮಾಡುತ್ತೇನೆ ಎಂದು ಹೇಳಿದ ಸಾ ರಾ ಮಹೇಶ್ ಪರೋಕ್ಷವಾಗಿ 2015ರಲ್ಲಿ ಮೃತಪಟ್ಟ ಐಎಎಸ್ ಅಧಿಕಾರಿ ಡಿ ಕೆ ರವಿ ಮತ್ತು ಅವರ ಸಾವಿನ ಬಳಿಕ ಕೇಳಿಬಂದ ರೋಹಿಣಿ ಸಿಂಧೂರಿ ಹೆಸರಿನ ಬಗ್ಗೆ ಪ್ರಸ್ತಾಪಿಸಿದರು.

ಮೈಸೂರು ಜನತೆಗೆ ಕುಡಿಯಲು ನೀರಿಲ್ಲ, ಅಂತಹುದರಲ್ಲಿ ರೋಹಿಣಿ ಸಿಂಧೂರಿಯವರು ಜಿಲ್ಲಾಧಿಕಾರಿ ನಿವಾಸದಲ್ಲಿ ಪಾರಂಪರಿಕ ಕಟ್ಟಡಗಳಿ ಧಕ್ಕೆಯನ್ನುಂಟುಮಾಡಿ, ನಿಯಮಬಾಹಿರವಾಗಿ ಈಜುಕೊಳ ಕಟ್ಟಿಸಿದ್ದಾರೆ, ಇದರ ಅವಶ್ಯಕತೆಯೇನಿತ್ತು ಎಂದು ಕೇಳಿದ್ದಾರೆ.

ಮೈಸೂರಿನಲ್ಲಿ ಸರ್ಕಾರಿ ಜಮೀನುಗಳ ಒತ್ತುವರಿಯಾಗಿದೆ, ಅದರ ತನಿಖೆಗೆ ಮುಂದಾಗಿದ್ದೆ ಎನ್ನುತ್ತಾರೆ, ಇದಕ್ಕೆ ಸ್ಪಷ್ಟವಾದ ಲೆಕ್ಕಾಚಾರಗಳೆಲ್ಲಿದೆ, ಇದು ರಾಜಕಾರಣಿಗಳಿಗೆ ಮಸಿ ಬಳಿಯುವ ಯತ್ನವಷ್ಟೆ, ನಮ್ಮ ಹೆಸರನ್ನು ಕೆಡಿಸಲು ತಮ್ಮ ತಪ್ಪುಗಳನ್ನು ಮುಚ್ಚಿಹಾಕಲು ರಾಜಕೀಯ ನಾಯಕರ ಮೇಲೆ ರೋಹಿಣಿ ಸಿಂಧೂರಿ ಗೂಬೆ ಕೂರಿಸುತ್ತಿದ್ದಾರೆ ಎಂದರು.

ರಾಜ್ಯದ ಇಬ್ಬರು ಮಹಿಳಾ ಐಎಎಸ್ ಅಧಿಕಾರಿಗಳ ಬಹಿರಂಗ ಕಿತ್ತಾಟಕ್ಕೆ ಭೂ ಹಗರಣ ಕಾರಣವಾಗಿದ್ದು, ಸರ್ಕಾರ ಕೂಡಲೇ ಹಗರಣದ ಬಗ್ಗೆ ಸ್ವತಂತ್ರ ತನಿಖಾ ಸಂಸ್ಥೆ ಮೂಲಕ ತನಿಖೆ ನಡೆಸಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಿನ್ನೆ ಆಗ್ರಹಿಸಿದ ಬೆನ್ನಲ್ಲೇ ಶಾಸಕ ಸಾ.ರಾ.ಮಹೇಶ್ ಇಂದು ಸುದ್ದಿಗೋಷ್ಠಿಯಲ್ಲಿ ಈ ಸ್ಪಷ್ಟನೆ ನೀಡಿದ್ದಾರೆ.

ಮೈಸೂರಿನ ರಾಜಕಾರಣಿಗಳ ಕಳಂಕ ಬಗ್ಗೆ ತನಿಖೆಯಾಗಬೇಕು, ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು, ಇದನ್ನು ಇಲ್ಲಿಗೇ ಬಿಡುವುದಿಲ್ಲ, ವಿಧಾನಸೌಧದಲ್ಲಿಯೂ ಚರ್ಚೆಯಾಗಲಿ, ರಾಜಕಾರಣಿಗಳಿಗೆ ಬಂದಿರುವ ಕಳಂಕ ನಿವಾರಣೆಗೆ ವಿಧಾನಸಭೆಯಲ್ಲಿ ಹೋರಾಡುವೆ ಎಂದು ಸಾ ರಾ ಮಹೇಶ್ ಸವಾಲು ಗುಡುಗಿದ್ದಾರೆ. 

SCROLL FOR NEXT