ರಾಜ್ಯ

ಐಎಸ್ ಡಿ ಕಾಲ್, ಸ್ಥಳೀಯ ಕರೆಯಾಗಿ ಬದಲಾವಣೆ: ದೂರ ಸಂಪರ್ಕ ಇಲಾಖೆಗೆ ವಂಚಿಸುತ್ತಿದ್ದ ಇಬ್ಬರ ಬಂಧನ

Shilpa D

ಬೆಂಗಳೂರು: ಅನಧಿಕೃತ ಟೆಲಿಫೋನ್ ಎಕ್ಸ್‌ಚೇಂಜ್ ವ್ಯವಸ್ಥೆಯ ಮೂಲಕ ಅಂತರರಾಷ್ಟ್ರೀಯ ಕರೆಗಳನ್ನು (ಐಎಸ್‌ಡಿ) ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ, ದೂರಸಂಪರ್ಕ ಇಲಾಖೆಗೆ ವಂಚಿಸುತ್ತಿದ್ದ ಜಾಲದಲ್ಲಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. 

ಮಿಲಿಟರಿ ಇಂಟಲಿಜೆನ್ಸ್‌ ಸಹಕಾರದೊಂದಿಗೆ ಸಿಸಿಬಿಯ ‘ಭಯೋತ್ಪಾದನೆ ನಿಗ್ರಹ ದಳ’ದ (ಎಟಿಸಿ) ಅಧಿಕಾರಿಗಳು ಬಂಧಿಸಿದ್ದಾರೆ. ಬಿಟಿಎಂ ಬಡಾವಣೆಯಲ್ಲಿ ವಾಸವಿದ್ದ ಕೇರಳದ ಇಬ್ರಾಹಿಂ ಪುಲ್ಲಟ್ಟಿ (36) ಹಾಗೂ ತಮಿಳುನಾಡಿನ ಗೌತಮ್ (27) ಬಂಧಿತರು.

ಆರೋಪಿಗಳು ಒಂದೇ ಬಾರಿಗೆ 32 ಸಿಮ್‌ ಕಾರ್ಡ್‌ಗಳನ್ನು ಬಳಸುವ 30 ಸಿಮ್‌ ಬಾಕ್ಸ್‌ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಿಟಿಎಂ ಬಡಾವಣೆಯ ಆರು ಸ್ಥಳಗಳಲ್ಲಿ ಅಳವಡಿಸಿಕೊಂಡಿದ್ದರು, ಸುಮಾರು 900ಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳನ್ನು ಬಳಸಿ, ಅನಧಿಕೃತವಾಗಿ ಅಂತರರಾಷ್ಟ್ರೀಯ ಕರೆಗಳನ್ನು (ಐಎಸ್‌ಡಿ) ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸುತ್ತಿದ್ದರು. ಆರೋಪಿಗಳ ವಿರುದ್ಧ ಸೈಬರ್ ಕ್ರೈಂ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ’ ಎಂದು ಸಿಸಿಬಿ ಜಂಟಿ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ತಿಳಿಸಿದರು.

ಬೇರೆ ದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಭಾರತೀಯರು  ಇಲ್ಲಿನವರೊಂದಿಗೆ ಮಾತನಾಡಲು ಐಎಸ್‌ಡಿ ಕರೆಗಳನ್ನು ಬಳಸಬೇಕು. ಐಎಸ್ ಡಿ ಕರೆಗಳ ದರ ಪ್ರತಿ ಸೆಕೆಂಡಿಗೆ 10 ರು ಇರುತ್ತದೆ, ಆದರೆ ಆರೋಪಿಗಳು ಅದನ್ನು ರುಪಾಯಿಗೆ ಪರಿವರ್ತಿಸಿಕೊಟ್ಟಿದ್ದರು.

ದುಬೈನ ವ್ಯಕ್ತಿಯೊಬ್ಬನಿಂದ ಈ ತಂತ್ರಜ್ಞಾನದ ತರಬೇತಿ ಪಡೆದಿದ್ದ ಆರೋಪಿಗಳು, ಪ್ರತಿ ತಿಂಗಳು 15 ಲಕ್ಷದವರೆಗೆ ಹಣ ಸಂಪಾದಿಸುತ್ತಿದ್ದರು. ಒಂದು ವರ್ಷದಿಂದ ನಡೆಯುತ್ತಿರುವ ಈ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಮಾಹಿತಿ ಸಿಕ್ಕಿದ್ದು, ಅವರನ್ನು ಬಂಧಿಸುವ ಕಾರ್ಯಾಚರಣೆ ನಡೆಯುತ್ತಿದೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT