ರಾಜ್ಯ

ರಾಜ್ಯದಲ್ಲಿ ಕೊರೋನಾ ಇಳಿಮುಖ: ಬೆಂಗಳೂರಿನಲ್ಲಿ 1,154 ಸೇರಿ 8,249 ಹೊಸ ಪ್ರಕರಣ ಪತ್ತೆ, 159 ಮಂದಿ ಬಲಿ!

Vishwanath S

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಇಳಿಮುಖದತ್ತ ಸಾಗಿದೆ. ಇಂದು 8,249 ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ 27,47,539ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಯಲ್ಲಿ ಮಹಾಮಾರಿಗೆ 159 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 32,644ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರಿನಲ್ಲಿ ಇಂದು 1,154 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 11,92,886ಕ್ಕೆ ಏರಿಕೆಯಾಗಿದೆ. ಇನ್ನು ನಗರದಲ್ಲಿ ಸೋಂಕಿಗೆ 48 ಮಂದಿ ಬಲಿಯಾಗಿದ್ದಾರೆ.

ರಾಜ್ಯದಲ್ಲಿ ಇಂದು ಸಹ ಹೊಸ ಪಾಸಿಟಿವ್ ಪ್ರಕರಣಗಳಿಗಿಂತ ಹೆಚ್ಚು ಅಂದರೆ 14,975 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 25,11,105ಕ್ಕೆ ಏರಿಕೆಯಾಗಿದೆ. ಇನ್ನು 2,03,769 ಸಕ್ರೀಯ ಪ್ರಕರಣಗಳಿವೆ.

ರಾಜ್ಯಾದ್ಯಂತ ಇಂದು 1,69,695 ಕೋವಿಡ್ ಟೆಸ್ಟ್ ನಡೆಸಲಾಗಿದ್ದು, 8,249 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 4.86ಕ್ಕೆ ಇಳಿದಿದೆ.

ಹೊಸ ಪ್ರಕರಣಗಳ ಪೈಕಿ ಬೆಂಗಳೂರು ನಗರದಲ್ಲಿ 1,154, ಬೆಳಗಾವಿಯಲ್ಲಿ 436, ಬಳ್ಳಾರಿಯಲ್ಲಿ 189, ಚಿಕ್ಕಬಳ್ಳಾಪುರದಲ್ಲಿ 168, ಚಿಕ್ಕಮಗಳೂರು 332, ದಕ್ಷಿಣ ಕನ್ನಡದಲ್ಲಿ 506, ದಾವಣಗೆರೆಯಲ್ಲಿ 260, ಹಾಸನದಲ್ಲಿ 733, ಮೈಸೂರಿನಲ್ಲಿ 817, ಶಿವಮೊಗ್ಗದಲ್ಲಿ 429, ತುಮಕೂರಿನಲ್ಲಿ 576, ಉಡುಪಿಯಲ್ಲಿ 215, ಉತ್ತರ ಕನ್ನಡದಲ್ಲಿ 311 ಪ್ರಕರಣಗಳು ವರದಿಯಾಗಿವೆ.

ಕಳೆದ 24 ತಾಸಿನಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಪೈಕಿ ಬೆಂಗಳೂರು ನಗರದಲ್ಲಿ 48, ಗ್ರಾಮಾಂತರದಲ್ಲಿ 6, ಶಿವಮೊಗ್ಗ 7, ಹಾವೇರಿ 10, ಧಾರವಾಡದಲ್ಲಿ 9, ಮೈಸೂರಿನಲ್ಲಿ 20 ಪ್ರಕರಣಗಳು ಸೇರಿವೆ.

SCROLL FOR NEXT