ರಾಜ್ಯ

ನಿಮ್ಹಾನ್ಸ್ ಗೆ ಮೂರನೇ ಬಾರಿಯೂ ಹಂಗಾಮಿ ನಿರ್ದೇಶಕರ ನೇಮಕ: ಈವರೆಗೂ ಪೂರ್ಣಾವಧಿ ಮುಖ್ಯಸ್ಥರಿಲ್ಲ!

Nagaraja AB

ಬೆಂಗಳೂರು: ಕೇಂದ್ರ ಸರ್ಕಾರ ಸತತ ಮೂರನೇ ಬಾರಿಗೆ ಉನ್ನತ ಮಾನಸಿಕ ಆರೋಗ್ಯ ಸಂಸ್ಥೆಗೆ ಹಂಗಾಮಿ ನಿರ್ದೇಶಕರನ್ನು ನೇಮಕ ಮಾಡುವುದರೊಂದಿಗೆ ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯ ಪ್ರಮುಖ ಕುರ್ಚಿಯ ಕಣ್ಣಾ- ಮುಚ್ಚಾಲೆ ಮುಂದುವರೆದಿದೆ. ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ನಿಮ್ಹಾನ್ಸ್ ಗೆ ಕೇವಲ ಪೂರ್ಣವಧಿ ನಿರ್ದೇಶಕರ ನೇಮಕಕ್ಕಿಂತಲೂ ಇದು ಅಗತ್ಯವಾಗಿದೆ ಎಂದು ಮೂಲಗಳು ಹೇಳಿವೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸೂಚನೆಯಂತೆ ಮಕ್ಕಳ ಮತ್ತು ಹದಿಹರೆಯದ ಮನೋವೈದ್ಯಶಾಸ್ತ್ರದ ಹಿರಿಯ ಪ್ರಾಧ್ಯಾಪಕ ಶೇಖರ್ ಶೇಷಾದ್ರಿ ಅವರನ್ನು ಅವರು ನಿವೃತ್ತಿಯಾಗುವವರೆಗೂ ಅಥವಾ ಪೂರ್ಣಾವಧಿಯ ನಿರ್ದೇಶಕರು ಅಧಿಕಾರ ಪಡೆಯುವವರೆಗೂ ಹಂಗಾಮಿ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ ಎಂದು ನಿಮ್ಹಾನ್ಸ್ ಗುರುವಾರ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆದೇಶದ ಪ್ರಕಾರ, ನವೆಂಬರ್ 16, 2021ರವರೆಗೂ ನಿರ್ದೇಶಕರ ಕಾರ್ಯಗಳನ್ನು ಪ್ರೊಫೆಸರ್ ಶೇಷಾದ್ರಿ ನೋಡಿಕೊಳ್ಳಲಿದ್ದಾರೆ.

ಹಿರಿಯ ಅಧ್ಯಾಪಕ ಡಾ. ಸತೀಶ್ ಚಂದ್ರ ಗಿರಿಮಾಜಿ ಅವರಿಂದ ಪ್ರೊಫೆಸರ್ ಶೇಖರ್ ಶೇಷಾದ್ರಿ ಅಧಿಕಾರ ವಹಿಸಿಕೊಂಡಿದ್ದಾರೆ. ಅದಕ್ಕೂ ಮುನ್ನ ಹಿರಿಯ ಪ್ರೊಫೆಸರ್ ಮುನ್ನ ಡಾ. ಜಿ. ಗುರುರಾಜ್ ಹಂಗಾಮಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ, 65 ನೇ ವಯಸ್ಸಿನಲ್ಲಿ ನಿವೃತ್ತಿಯಾಗಿದ್ದರು.

ಡಾ. ಬಿ.ಎನ್. ಗಂಗಾಧರ್ ನಿರ್ದೇಶಕ ಸ್ಥಾನದಿಂದ ನಿವೃತ್ತಿಯಾದ ನಂತರ ಕಳೆದ ವರ್ಷ ಡಿಸೆಂಬರ್ ನಿಂದಲೂ ನಿಮ್ಹಾನ್ಸ್ ಗೆ ಹಂಗಾಮಿ ನಿರ್ದೇಶಕರನ್ನೇ ನೇಮಕ ಮಾಡಲಾಗುತ್ತಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನವದೆಹಲಿಯ ಏಮ್ಸ್ ಆಸ್ಪತ್ರೆಯ ನ್ಯೂರೊಲಾಜಿ ಮುಖ್ಯಸ್ಥರಾದ ಪ್ರೊಫೆಸರ್ ಎಂ.ವಿ. ಪದ್ಮ ಶ್ರಿವಾಸ್ತವ ಅವರನ್ನು ನಿರ್ದೇಶಕರನ್ನಾಗಿ ನೇಮಕ ಮಾಡಿತ್ತು. ಫೆಬ್ರವರಿ 1 ರಂದು ಅವರು ಅಧಿಕಾರ ಸ್ವೀಕರಿಸಿದ್ದರು. ಆದರೆ, ಕೆಲ ತಾಂತ್ರಿಕ ಕಾರಣಗಳಿಂದಾಗಿ ಅವರ ನೇಮಕ ಸಿಂಧುವಾಗಲಿಲ್ಲ.

ಶೋಧನಾ ಸಮಿತಿಯ ಶಿಫಾರಸ್ಸಿನ ಮೇರೆಗೆ ಸಂಪುಟದ ನೇಮಕಾತಿ ಸಮಿತಿಯಿಂದ ಐದು ವರ್ಷದ ಅವಧಿಗೆ ನಿಮ್ಹಾನ್ಸ್ ನಿರ್ದೇಶಕರನ್ನು ನೇಮಕ ಮಾಡಲಾಗುತ್ತದೆ. ಮೂಲಗಳ ಪ್ರಕಾರ, ಸಂಪುಟ ನೇಮಕಾತಿ ಸಮಿತಿ ಇನ್ನೂ ಚರ್ಚಿಸಿಲ್ಲ ಎನ್ನಲಾಗುತ್ತಿದೆ. 2012ರಲ್ಲಿ ನಿಮ್ಹಾನ್ಸ್ ರಾಷ್ಟ್ರೀಯ ಪ್ರಮುಖ ಸಂಸ್ಥೆ ಎಂದು ಸಂಸತ್ ಘೋಷಿಸಿದ ಬಳಿಕ ನಿರ್ದೇಶಕರ ಹುದ್ದೆ ಮುಕ್ತ ಆಯ್ಕೆಯ ಪೋಸ್ಟ್ ಆಗಿದೆ.

ಗಂಗಾಧರ್ ನಿವೃತ್ತಿಯ ನಂತರ ಎಂಟು ಅಭ್ಯರ್ಥಿಗಳು ತೆರವಾದ ನಿರ್ದೇಶಕ ಸ್ಥಾನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಈ  ಹುದ್ದೆಗಾಗಿ ಕೇಂದ್ರ ಆರೋಗ್ಯ ಸಚಿವಾಲಯದಿಂದ ಪ್ರಕಟಣೆ ಹೊರಡಿಸಲಾಗಿತ್ತು. ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಮತ್ತು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ವರ್ಚುಯಲ್ ನಲ್ಲಿ ಸಂದರ್ಶನ ಕೂಡಾ ನಡೆಸಿದ್ದರು.

SCROLL FOR NEXT