ರಾಜ್ಯ

ಮಂಗಳೂರು ವಿಮಾನ ನಿಲ್ದಾಣ ಸಂಪರ್ಕಿಸುವ ಸೇತುವೆಯಲ್ಲಿ ಬೃಹತ್ ಬಿರುಕು; ಸಂಚಾರ ಸ್ಥಗಿತ

Raghavendra Adiga

ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಬಜ್ಪೆ ಸಮೀಪದ ಮರವೂರಿನಲ್ಲಿರುವ ಸೇತುವೆ ಮಂಗಳವಾರ ಮುಂಜಾನೆ ಭಾರೀ ಮಳೆಯಿಂದಾಗಿ ದೊಡ್ದ ಬಿರುಕು ಬಿಟ್ಟಿದೆ. ಸೇತುವೆಯ ಒಂದು ಭಾಗದ ಕಂಬವು ಹಾನಿಗೀಡಾಗಿರುವುದರಿಂದ ಯಾವುದೇ ಕ್ಷಣ ಸೇತುವೆ ಕುಸಿಯುವ ಆತಂಕವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಸೇತುವೆಯ ಮೇಲೆ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಸಮೀಪದಲ್ಲಿ ಹೊಸ ಸೇತುವೆ ನಿರ್ಮಾಣ ನಡೆಯುತ್ತಿರುವುದರಿಂದ, ನಿರ್ಮಿಸಲಾದ ಒಡ್ಡು ಕಂಬದ ಕುಸಿತಕ್ಕೆ ಕಾರಣವಾಗುವ ಒತ್ತಡ ಹೇರಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ನಗರ ಪೊಲೀಸ್ ಆಯುಕ್ತ ಎನ್.ಶಶಿ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಡಾ.ಭರತ್ ಶೆಟ್ಟಿ, ಉಮಾನಾಥ್ ಕೋಟ್ಯಾನ್, ಮಾಜಿ ಎಂ.ಎಲ್.ಸಿ ಐವನ್ ಡಿಸೋಜಾ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು.

ಉಡುಪಿಯಿಂದ ವಿಮಾನ ನಿಲ್ದಾಣಕ್ಕೆ ಬರುವವರು ಮುಲ್ಕಿ, ಕಿನ್ನಿಗೋಳಿ, ಕಟೀಲ್ ಮತ್ತು ಬಜ್ಪೆ ಮೂಲಕ ತಲುಪಬಹುದು, ಆದರೆ ಕಾಸರಗೋಡು ಮತ್ತು ಮಂಗಳೂರಿನಿಂದ ವಿಮಾನ ನಿಲ್ದಾಣಕ್ಕೆ ಬರುವವರು ವಾಮಂಜೂರ್, ಗುರುಪುರ, ಕೈಕಂಬ ಬಜ್ಪೆ ಸ್ತೆಯಲ್ಲಿ ಪ್ರಯಾಣಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಏತನ್ಮಧ್ಯೆ, ಅಡೆತಡೆಯಿಲ್ಲದ ಮರಳು ಗಣಿಗಾರಿಕೆಯು ಸೇತುವೆ ಹಾನಿಯಾಗಲು ಕಾರಣ ಎಂದು ಸ್ಥಳೀಯರು ಹೇಳಿದ್ದಾರೆ.

SCROLL FOR NEXT