ರಾಜ್ಯ

ಷರತ್ತುಗಳೊಂದಿಗೆ ಜೂನ್​​ 21ರಿಂದ ಬಿಎಂಟಿಸಿ ಸಂಚಾರ ಆರಂಭಕ್ಕೆ ಬಿಬಿಎಂಪಿ ಒಪ್ಪಿಗೆ

Srinivasamurthy VN

ಬೆಂಗಳೂರು: ಸಾರ್ವಜನಿಕರಿಂದ ತೀವ್ರ ಒತ್ತಡ ಮನವಿ ಕೇಳಿಬಂದ ಹಿನ್ನಲೆಯಲ್ಲಿ ಬಿಬಿಎಂಪಿ ಇದೇ ಸೋಮವಾರ ಜೂ.21ರಿಂದ ಷರತ್ತುಗಳೊಂದಿಗೆ ಬಿಎಂಟಿಸಿ ಬಸ್‌ಗಳನ್ನು ರಸ್ತೆಗಿಳಿಸಲು ಬಿಬಿಎಂಪಿ ಒಪ್ಪಿಗೆ ಸೂಚಿಸಿದೆ.

ಗುರುವಾರ ಬಿಬಿಎಂಪಿ ಕಚೇರಿಯಲ್ಲಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು, ನಗರ ಪೊಲೀಸ್​ ಕಮಿಷನರ್​ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಿ ಸಾರ್ವಜನಿಕ ಸಾರಿಗೆಗೆ ಅನುಮತಿ ನೀಡಲಾಯಿತು‌ ಎಂದು ತಿಳಿದುಬಂದಿದೆ,

ಮೊದಲ ಹಂತದ ಲಾಕ್ಡೌನ್ ಸಡಿಲಿಕೆ ವೇಳೆ ಸಾರ್ವಜನಿಕ ಸಾರಿಗೆಗೆ ವಿನಾಯಿತಿ ಬೇಡ ಎಂದಿದ್ದ ಬಿಬಿಎಂಪಿ, ಇದೀಗ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ ಒತ್ತಡ ಕೇಳಿಬಂದಿದ್ದರಿಂದ ಸಾರ್ವಜನಿಕ ಸಾರಿಗೆಗೆ ಅವಕಾಶ ನೀಡಿದೆ.

ಈ ಮೊದಲು ಸಾರ್ವಜನಿಕ ಸಾರಿಗೆಗೆ ಅವಕಾಶ ಕಲ್ಪಿಸಿದರೆ ಸೋಂಕು ಹೆಚ್ಚಳವಾಗಲಿದೆ. ಹೀಗಾಗಿ ಸದ್ಯಕ್ಕೆ ಬಸ್​ ಸಂಚಾರಕ್ಕೆ ಅನುಮತಿ ಬೇಡ ಎಂದು ಪಾಲಿಕೆ ಸರ್ಕಾರಕ್ಕೆ ತಿಳಿಸಿತ್ತು. ಇದೀಗ ಒತ್ತಡಕ್ಕೆ ಮಣಿದಿರುವ ಬಿಬಿಎಂಪಿ ಸೋಮವಾರದಿಂದ ನಗರದಲ್ಲಿ ಬಸ್​ ಸಂಚಾರಕ್ಕೆ ಅನುಮತಿ ನೀಡಲು  ನಿರ್ಧರಿಸಿ ಅಧಿಕಾರಿಗಳ ಅಭಿಪ್ರಾಯ ಪಡೆದು ಷರತ್ತುಬದ್ಧ ಅನುಮತಿ ನೀಡಲು ಬಿಬಿಎಂಪಿ ಒಪ್ಪಿಗೆ ಸೂಚಿಸಿದೆ.

ಷರತ್ತುಗಳು:
ಶೇಕಡಾ 50ರಷ್ಟು ಬಸ್ಸುಗಳನ್ನು ಮಾತ್ರ ರಸ್ತೆಗಿಳಿಸಲು ಅನುಮತಿ, ಬಸ್ಸುಗಳಲ್ಲಿ ಶೇಕಡಾ 50ರಷ್ಟು ಪ್ರಯಾಣಿಕರಿಗೆ ಸಂಚಾರಕ್ಕೆ ಅನುಮತಿ, ಮಾಸ್ಕ್,‌ ಸಾಮಾಜಿಕ ಅಂತರ ಕಡ್ಡಾಯ, ಬಸ್ಸುಗಳಲ್ಲಿ ಒಂದು ಆಸನ ಬಿಟ್ಟು ಒಂದು ಆಸನದಲ್ಲಿ ಕುಳಿತು ಪ್ರಯಾಣಿಸಲು ಅವಕಾಶ, ನಿಂತುಕೊಂಡು ಪ್ರಯಾಣಿಸುವುದಕ್ಕೆ ಅವಕಾಶ ಇಲ್ಲ ಎಂದಿದೆ.

ಬಸ್​​ ನಿಲ್ದಾಣಗಳಲ್ಲಿ ಜನಸಂದಣಿ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪೊಲೀಸ್​ ಇಲಾಖೆ ಮತ್ತು ಬಿಎಂಟಿಸಿ ಅಧಿಕಾರಿಗಳಿಗೆ ನೀಡಿದೆ. ಮೆಜೆಸ್ಟಿಕ್, ಟರ್ಮಿನಲ್ಸ್, ಪ್ರಮುಖ ಬಸ್​ ನಿಲ್ದಾಣಗಳಲ್ಲಿ ಕೋವಿಡ್​ ಟೆಸ್ಟ್​ ಕಡ್ಡಾಯಗೊಳಿಸಿದೆ. ನೈಟ್ ಕರ್ಫ್ಯೂ ಆರಂಭಕ್ಕೂ ಮುನ್ನ ಅಂದರೆ 7 ಗಂಟೆಯೊಳಗೆ ಬಸ್​ ಸಂಚಾರ ನಿಲ್ಲಿಸಬೇಕು ಎಂದು ಷರತ್ತು ವಿಧಿಸಿದೆ.
 

SCROLL FOR NEXT