ರಾಜ್ಯ

ರಾಜ್ಯದಲ್ಲಿ ಮೂರ್ನಾಲ್ಕು ದಿನಗಳಿಂದ ಸತತ ಮಳೆ: ಜನಜೀವನ ಅಸ್ತವ್ಯಸ್ತ, ಜಿಲ್ಲಾಧಿಕಾರಿಗಳೊಂದಿಗೆ ಇಂದು ಸಿಎಂ ಸಭೆ

Sumana Upadhyaya

ಬೆಂಗಳೂರು: ಈ ಬಾರಿ ಮುಂಗಾರಿನ ಅಬ್ಬರ ಜೋರಾಗಿದೆ. ಮಲೆನಾಡು, ಕರಾವಳಿ, ಉತ್ತರ ಕರ್ನಾಟಕ ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ರಸ್ತೆಗಳು, ಸೇತುವೆಗಳು ಮತ್ತು ಕೃಷಿ ಭೂಮಿಗಳು ಜಲಾವೃತವಾಗಿ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ. 

ಕಳೆದ ನಾಲ್ಕು ದಿನಗಳಿಂದ ಸತತ ಮಳೆಯಿಂದಾಗಿ ಬಣಕಲ್, ಕೊಟ್ಟಿಗೆಹಾರ, ಬಾಲೂರು ಮತ್ತು ಚಾರ್ಮಾಡಿ ಘಾಟಿಗಳ ಸುತ್ತಮುತ್ತ 39.58 ಸೆಂಟಿ ಮೀಟರ್ ಮಳೆಯಾಗಿದೆ. ಬಾಲೂರು, ಬಣಕಲ್, ದೇವಗನೂಲ್, ಜರ್ಗಲ್ ಮತ್ತು ಚಕಮಕಿ ಸುತ್ತಮುತ್ತ ಕಳೆದ ನಾಲ್ಕೈದು ದಿನಗಳಿಂದ ವಿದ್ಯುತ್ ಇಲ್ಲದಾಗಿದೆ. ಪರೀಕ್ಷೆಗೆ ತಯಾರಾಗುತ್ತಿರುವ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆಯಾಗಿದೆ. ಮೊಬೈಲ್ ನೆಟ್ ವರ್ಕ್ ಸಮಸ್ಯೆಯಿಂದಾಗಿ ಆನ್ ಲೈನ್ ತರಗತಿಗಳಿಗೆ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ.

ಹೇಮಾವತಿ ನದಿ ತುಂಬಿ ಹರಿಯುತ್ತಿದ್ದು ಅಪಾಯದ ಮಟ್ಟ ತಲುಪಿದೆ. ಬಣಕಲ್ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯೊಂದರ ಹತ್ತಿರ ಭಾರೀ ಗಾತ್ರದ ಮರ ಬಿದ್ದು ಜಿಲ್ಲೆಯಲ್ಲಿ ಇದುವರೆಗೆ ಏಳು ಮನೆಗಳಿಗೆ ಮಳೆಯಿಂದ ಹಾನಿಯಾಗಿದೆ. ಬೆಳಗಾವಿಯಲ್ಲಿ, ಬಳ್ಳಾರಿ ಕಾಲುವೆ ಒಡೆದು ನೀರು ನುಗ್ಗಿ ಅಕ್ಕಪಕ್ಕದಲ್ಲಿ ಬೆಳೆದ ತರಕಾರಿಗಳು ಹಾನಿಗೀಡಾಗಿವೆ. ಮಹಂತೇಶ ನಗರ ಹತ್ತಿರ ರಾಷ್ಟ್ರೀಯ ಹೆದ್ದಾರಿಗೆ ಸೇರುವ ಸರ್ವಿಸ್ ರೋಡ್ ಕುಸಿದುಬಿದ್ದಿದ್ದು, ಸ್ಥಳೀಯ ಅಧಿಕಾರಿಗಳು ಜನರ, ವಾಹನ ಸಂಚಾರವನ್ನು ಬದಲಿಸಿದ್ದಾರೆ.

ಬೆಳಗಾವಿ ಜಿಲ್ಲಾಧಿಕಾರಿ ಮಹಂತೇಶ ಹೀರೇಮಠ ನಿಪ್ಪಾಣಿ ತಾಲ್ಲೂಕಿನ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ನದಿ ದಂಡೆಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಸೂಚಿಸಿದ್ದಾರೆ. ಬಿಕ್ಕಟ್ಟು ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದೆ ಎಂದು ಅವರು ಹೇಳಿದ್ದಾರೆ. ಪಶ್ಚಿಮ ಘಟ್ಟಗಳಲ್ಲಿ, ಮಹಾರಾಷ್ಟ್ರ ಮತ್ತು ಕೃಷ್ಣಾ, ಘಟಪ್ರಭಾ ನದಿಗಳ ಜಲಾನಯನ ಪ್ರದೇಶಗಳಲ್ಲಿ ಧಾರಾಕಾರ ಮಳೆಯಿಂದಾಗಿ ಆಲಮಟ್ಟಿ ಜಲಾಶಯಕ್ಕೆ ಕಳೆದ 24 ಗಂಟೆಗಳಲ್ಲಿ ನೀರಿನ ಒಳಹರಿವು 10 ಪಟ್ಟು ಜಾಸ್ತಿಯಾಗಿದೆ.

ಹವಾಮಾನ ಇಲಾಖೆಯ ಪ್ರಕಾರ, ಕೃಷ್ಣ ನದಿಯ ಜಲಾನಯನ ಪ್ರದೇಶಗಳಲ್ಲಿ, ಮಹಾರಾಷ್ಟ್ರದ ವಿವಿಧ ಪಟ್ಟಣಗಳಲ್ಲಿ ಕಳೆದ 24 ಗಂಟೆಗಳಲ್ಲಿ ಭಾರಿ ಮಳೆಯಾಗಿದೆ. ಮಳೆ ಇನ್ನೂ ಒಂದು ವಾರ ಮುಂದುವರಿಯುವ ನಿರೀಕ್ಷೆಯಿದೆ. ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದ ಅಧಿಕಾರಿಗಳು ನಿನ್ನೆ 13,784 ಕ್ಯೂಸೆಕ್‌ಗಳ ಒಳಹರಿವು ದಾಖಲಾಗಿದೆ ಎಂದು ಹೇಳಿದ್ದು, ಮೊನ್ನೆ ಗುರುವಾರ 1.57 ಲಕ್ಷ ಕ್ಯೂಸೆಕ್‌ಗಳ (ಮಧ್ಯಾಹ್ನ 3) ಒಳಹರಿವು ದಾಖಲಾಗಿತ್ತು ಎಂದಿದ್ದಾರೆ. ಆದರೆ, ಅಧಿಕಾರಿಗಳು ನಾರಾಯಣಪುರ ಅಣೆಕಟ್ಟಿಗೆ ನೀರು ಹೊರಹಾಕಿಲ್ಲ.

ಸಚಿವರುಗಳೊಂದಿಗೆ ಬಿಎಸ್ ವೈ ಚರ್ಚೆ: ಕರ್ನಾಟಕದಲ್ಲಿ ಧಾರಾಕಾರ ಮಳೆಯಾಗುತ್ತಿದ್ದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಕುರಿತು ಸಚಿವರುಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.

ನಿನ್ನೆ ನಡೆದಿದ್ದ ಸಭೆಯಲ್ಲಿ, ನದಿ ಪಾತ್ರದಲ್ಲಿರುವ ಪ್ರದೇಶಗಳಲ್ಲಿ ಹಾನಿಗೀಡಾಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳುವ ಕುರಿತು ಚರ್ಚೆ ನಡೆಸಿದ್ದಾರೆ. ಇಂದು ಮಹಾರಾಷ್ಟ್ರ ನೀರಾವರಿ ಸಚಿವರು ರಾಜ್ಯಕ್ಕೆ ಆಗಮಿಸಿ ತಮ್ಮ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದರು.

ಮಹಾರಾಷ್ಟ್ರದ ಅಣೆಕಟ್ಟುಗಳಿಂದ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡುವುದರಿಂದ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ಉಂಟಾಗುತ್ತದೆ. ಮಾನ್ಸೂನ್ ಸನ್ನದ್ಧತೆ ಮತ್ತು ತೆಗೆದುಕೊಳ್ಳಬೇಕಾದ ತಡೆಗಟ್ಟುವ ಕ್ರಮಗಳ ಕುರಿತು ಇಂದು ಮುಖ್ಯಮಂತ್ರಿಗಳು 20 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವರ್ಚುವಲ್ ಸಭೆ ನಡೆಸಲಿದ್ದಾರೆ.

SCROLL FOR NEXT