ರಾಜ್ಯ

ಬೆಂಗಳೂರು: ಕೊಡಲಿ ಬೀಳಲಿರುವ 6300 ಮರಗಳ ರಕ್ಷಣೆಗೆ ಕೈ ಜೋಡಿಸಿದ ಸ್ಥಳೀಯರು, ಪರಿಸರ ಪ್ರೇಮಿಗಳು

Nagaraja AB

ಬೆಂಗಳೂರು: ಸಿಂಗನಾಯಕನಹಳ್ಳಿ ಕೆರೆ ಪುನರುಜ್ಜೀವನಗೊಳಿಸುವುದಕ್ಕಾಗಿ 6,316 ಮರಗಳಿಗೆ ಕೊಡಲಿ ಹಾಕಲು ಅರಣ್ಯ ಇಲಾಖೆ ಮುಂದಾಗಿದ್ದು, ಇದೀಗ ಅವುಗಳ ರಕ್ಷಣೆಗೆ ನಾಗರಿಕರು ಹಾಗೂ ಪರಿಸರ ಪ್ರೇಮಿಗಳು ಕೈ ಜೋಡಿಸಿದ್ದಾರೆ.

6316 ಮರಗಳನ್ನು ಕಡಿಯಲು ಸಣ್ಣ ನೀರಾವರಿ ಇಲಾಖೆಯಿಂದ ಬಂದಿರುವ ಪ್ರಸ್ತಾವಕ್ಕೆ ಕರ್ನಾಟಕ ಅರಣ್ಯ ಇಲಾಖೆ ಸಾರ್ವಜನಿಕ ಆಕ್ಷೇಪಣೆಗಳನ್ನು ಕೋರಿದೆ.

ಸಿಂಗನಾಯಕನಹಳ್ಳಿ ಕೆರೆ ಸುಮಾರು 275 ಎಕರೆ ಪ್ರದೇಶವಿದೆ. ಆದರೆ,  ಕಳೆದ 20 ವರ್ಷಗಳಲ್ಲಿ ಇದು ಎಂದಿಗೂ ಭರ್ತಿಯಾಗಿಲ್ಲ ಎಂದು ಎಂಐಡಿ, ಕೆಎಫ್‌ಡಿ ಮತ್ತು ಸ್ಥಳೀಯ ಅಧಿಕಾರಿಗಳು ಹೇಳುತ್ತಾರೆ. ವಾಸ್ತವವಾಗಿ ಕೆರೆ  ಮತ್ತು ಬಂಡೆಯಲ್ಲಿ ಸಂಗ್ರಹವಾಗಿರುವ ಹೂಳು ಮತ್ತು ಮಣ್ಣು ಎಷ್ಟು ಇದೆಯೆಂದರೆ ಜನರು ಈಗ ಅದರ ಮೇಲೆ ನಡೆದು ಜಾನುವಾರುಗಳನ್ನು ಮೇಯಿಸುತ್ತಾರೆ. ಜಿಂಕೆ, ನರಿಯಂತಹ ಅನೇಕ ಸಣ್ಣ ಪ್ರಾಣಿಗಳಿಗೆ ನೆಲೆಯಾಗಿದೆ. 

ಮರ ಕಡಿಯುವುದಕ್ಕೆ ವಿರೋಧಗಳು ಎದುರಾಗುತ್ತಿದ್ದಂತೆ  ಅಂತಹ ಪ್ರಸ್ತಾವ ಮಾಡಿಲ್ಲ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಈ ಕೆರೆ ನಮ್ಮ ವ್ಯಾಪ್ತಿಯಲ್ಲಿದ್ದರೂ ಇದೀಗ ರಾಜ್ಯ ಕೆರೆ ಸಂರಕ್ಷಣಾ ಮತ್ತು ಅಭಿವೃದ್ಧಿ ಪ್ರಾಧಿಕಾರ ನಿರ್ವಹಣೆ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ. ಆದಾಗ್ಯೂ, ಮರಗಳನ್ನು ಕಡಿಯಲು ಅನುಮತಿ ನೀಡಿಲ್ಲ ಎಂದು ಕೆಟಿಸಿಡಿಎ ಇಂಜಿನಿಯರ್ ಹೇಳಿದ್ದಾರೆ. 

ದಾಖಲೆಗಳೊಂದಿಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ತನಿಖೆ ನಡೆಸಿದಾಗ ಕೆರೆ ದಂಡೆ ಮೇಲಿನ ಮರಗಳನ್ನು ಕಡಿಯಲು ಸಣ್ಣ ನೀರಾವರಿ ಇಲಾಖೆ ಕೋರಿರುವುದು ತಿಳಿದುಬಂದಿದೆ. ಈ ಯೋಜನೆಯು ಹೆಬ್ಬಾಳ- ನಾಗಾವಾರ ಕಣಿವೆ ಯೋಜನೆಯ ಭಾಗವಾಗಿದ್ದು, ಇದು ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಹಾಗೂ ಚಿಕ್ಕಬಳ್ಳಾಪುರ ಭಾಗದ 65ಕ್ಕೂ ಹೆಚ್ಚು ಕೆರೆ ಹಾಗೂ ಟ್ಯಾಂಕ್ ಗಳಿಗೆ ಶುದ್ಧೀಕರಿಸಿದ ತ್ಯಾಜ್ಯ ನೀರು ತುಂಬಿಸುವ ಉದ್ದೇಶ ಹೊಂದಿದೆ. 

15-20 ವರ್ಷಗಳ ಹಿಂದೆ ಸಿಂಗನಾಯಕನಹಳ್ಳಿ ಕೆರೆ ಬಳಿ ಅರಣ್ಯ ಇಲಾಖೆಯಿಂದ ಮರಗಳನ್ನು ಹಾಕಲಾಗಿದೆ. ಕೆರೆಯ ಆಳ ಹಾಗೂ ನೀರಿನ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲು ಸಣ್ಣ ನೀರಾವರಿ ಇಲಾಖೆ ಬಯಸುತ್ತದೆ. ಜನರು ಇದನ್ನು ವಿರೋಧಿಸುವುದನ್ನು ನಿಲ್ಲಿಸಬೇಕೆಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮರಗಳನ್ನು ಕಡಿಯುವ ಅಗತ್ಯವಿಲ್ಲ, ಸರ್ಕಾರ ತಮ್ಮ ಮನವಿಗಳನ್ನು ಆಲಿಸದಿದ್ದರೆ ಮರಗಳ ರಕ್ಷಣೆಗಾಗಿ ನ್ಯಾಯಾಲಯದ ಮೆಟ್ಟಿಲೇರುತ್ತವೆ ಎಂದು ಪರಿಸರ ಪ್ರೇಮಿ ರಾಮ್ ಪ್ರಸಾದ್  ತಿಳಿಸಿದರು.ಸಾಂಕ್ರಾಮಿಕದ ಸಂದರ್ಭದಲ್ಲಿ ಇಂತಹ ನೋಟಿಫಿಕೇಷನ್ ಹೊರಡಿಸುವ ಅಗತ್ಯವೇನಿತ್ತು ಎಂದು ಇನ್ನಿತರ ಪರಿಸರ ಪ್ರೇಮಿಗಳು ಪ್ರಶ್ನಿಸಿದ್ದಾರೆ.

SCROLL FOR NEXT