ರಾಜ್ಯ

ಕೋವಿಡ್ ನಿಯಮ ಉಲ್ಲಂಘನೆ: ಮಂಗಳೂರಿನಲ್ಲಿ ಬಿಜೆಪಿ ಕೌನ್ಸಿಲರ್ ಪುತ್ರಿಯದ್ದೂ ಸೇರಿ 4 ವಿವಾಹಗಳ ಮೇಲೆ ಅಧಿಕಾರಿಗಳ ದಾಳಿ

Raghavendra Adiga

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಹಾಗೂ ದತ್ತಿ ವಿಭಾಗದ ಅಧಿಕಾರಿಗಳು ನಗರದ ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ  ವಿವಾಹ ಸಮಾರಂಭಗಳ ಮೇಲೆ ದಾಳಿ ನಡೆಸಿ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಲಾಕ್ ಡೌನ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ದೇವಾಲಯದ ಆವರಣದಲ್ಲಿ ವಿವಾಹ ಕಾರ್ಯಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿಗೆ ದೂರು ಬಂದ ನಂತರ ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ನಾಲ್ಕು ವಿವಾಹಗಳಲ್ಲಿ, ಬಿಜೆಪಿಯ ಪಾಲಿಕೆಯ  ಕೌನ್ಸಿಲ್ ಸದಸ್ಯ ಭಾಸ್ಕರ್ ಚಂದ್ರ ಅವರ ಮಗಳ ವಿವಾಹ ಸಮಾರಂಭವೂ ಸೇರಿತ್ತು. ದೇವಾಲಯದ ಆವರಣದ ಹೊರಗೆ ನಿಲ್ಲಿಸಿದ್ದ ಅತಿಥಿಗಳ 10 ಕ್ಕೂ ಹೆಚ್ಚು ವಾಹನಗಳು ಸ್ವಲ್ಪ ಸಮಯದವರೆಗೆ ಸಂಚಾರ ದಟ್ಟಣೆಗೆ ಕಾರಣವಾಯಿತು.

ಕೋವಿಡ್-19 ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಒಂದೇ ಸಮಯದಲ್ಲಿ ನಾಲ್ಕು ವಿವಾಹಗಳನ್ನು ನಡೆಸಲು ದೇವಾಲಯ ಆಡಳಿತವು ಅನುಮತಿ ನೀಡಿದೆ ಎಂದು ಎಸಿ ಮದನ್ ಮೋಹನ್ ಹೇಳಿದ್ದಾರೆ. ಸಾಂಕ್ರಾಮಿಕ ಕಾಯ್ದೆಯಡಿ ನಾವು ಸಂಘಟಕರನ್ನು ಪಟ್ಟಿ ಮಾಡಿದ್ದೇವೆ. ಈ ನಿಟ್ಟಿನಲ್ಲಿ ವಿವರವಾದ ವರದಿಯನ್ನು ಪಡೆಯಲಾಗುವುದು ಎಂದು ಅವರು ಹೇಳಿದರು.

ವಿವಾಹ ಕಾರ್ಯಗಳನ್ನು ನಡೆಸಲು ಸಲ್ಲಿಸಿದ ದಾಖಲೆಗಳನ್ನು ಎಸಿ ಪರಿಶೀಲಿಸಿ ದೇವಾಲಯದ ವ್ಯವಸ್ಥಾಪಕ ಟ್ರಸ್ಟಿ ರಾಮನಾಥ್ ಹೆಗ್ಡೆ ಅವರನ್ನು ತರಾಟೆಗೆ  ತೆಗೆದುಕೊಂಡರು

"ನಾಲ್ಕು ಮದುವೆಗಳನ್ನು ನಡೆಸಲು ನೀವು ಹೇಗೆ ಅನುಮತಿ ಕೊಟ್ಟಿರಿ? ಮದುವೆಯಲ್ಲಿ ಎಷ್ಟು ಜನರಿಗೆ ಭಾಗವಹಿಸಲು ಅನುಮತಿ ನೀಡಲಾಯಿತು? ದಕ್ಷಿಣ ಕನ್ನಡದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವಾಗ, ನೀವು ಮದುವೆಗಳಿಗೆ ಹೇಗೆ ಅನುಮತಿಸಿದ್ದೀರಿ?" ಅವರು ಪ್ರಶ್ನಿಸಿದ್ದಾರೆ.

ಮದುವೆ ನಡೆಸಲು ಅನುಮತಿ ನೀಡಿದ ಎಂಸಿಸಿ ಅಧಿಕಾರಿಗಳ ವಿರುದ್ಧ ಸಹ ಪ್ರಕರಣ ದಾಖಲಿಸಲು ನಿರ್ದೇಶನ ನೀಡಿದರು. ಕೆಲವೇ ಅತಿಥಿಗಳ ಸಮ್ಮುಖದಲ್ಲಿ ಮನೆಗಳ ಒಳಗೆ ಮಾತ್ರ ಮದುವೆಗೆ ಅವಕಾಶವಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ ವಿ ಹೇಳಿದ್ದಾರೆ.

SCROLL FOR NEXT