ರಾಜ್ಯ

ಜುಲೈ 1 ರಿಂದ ಚಂದನದಲ್ಲಿ ವಿದ್ಯಾರ್ಥಿಗಳಿಗೆ ವಿಡಿಯೋ ಪಾಠ ಪ್ರಸಾರ

Vishwanath S

ಬೆಂಗಳೂರು: ಹೊಸ ಶಿಕ್ಷಣ ನೀತಿ ಜಾರಿಗೊಳಿಸುತ್ತಿರುವ ಸನ್ನಿವೇಶದಲ್ಲಿ ಶಿಕ್ಷಕ ತರಬೇತಿ ಸಂಸ್ಥೆಗಳು ಬಲಿಷ್ಠಗೊಳ್ಳಬೇಕು ಈ ನಿಟ್ಟಿನಲ್ಲಿ ಸಂಶೋಧನಾ ಹಾಗೂ ತರಬೇತಿ ಸಂಸ್ಥೆಗಳು ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಹೆಚ್ಚಿನ ಗಮನಹರಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸೋಮವಾರ ಹೇಳಿದ್ದಾರೆ.

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯದ ಪ್ರಗತಿ ಪರಾಮರ್ಶೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ಡಿಎಸ್‍ಇಆರ್‍ಟಿ ಸಂಸ್ಥೆಯು ಶಿಕ್ಷಣ ಸಂಶೋಧನೆಯಲ್ಲಿ ಪ್ರಧಾನವಾದ ಜವಾಬ್ದಾರಿ ಹೊಂದಿದ್ದು, ಈ ಸ್ವಾಯತ್ತ ಸಂಸ್ಥೆ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಸಂಶೋಧನಾ ವಿದ್ವಾಂಸರ ಸೇವೆಯನ್ನು ಪಡೆಯಲು ಆಲೋಚಿಸಲಾಗಿದೆ ಎಂದರು.

ಈ ವರ್ಷದ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗುವ ಇದೇ ಜು. 1ರಿಂದ ದೂರದರ್ಶನದ ಚಂದನಾ ವಾಹಿನಿ ಮೂಲಕ ಒಂದರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿದಿನ ವಿಡಿಯೋ ಪಾಠಗಳನ್ನು ಪ್ರಸಾರ ಮಾಡಲಾಗುತ್ತದೆ.

ಈ ಸಂದರ್ಭದಲ್ಲಿ ಕನ್ನಡ, ಇಂಗ್ಲಿಷ್ ಮತ್ತು ಉರ್ದು ಮಾಧ್ಯಮದ ಪಾಠಗಳು ಪ್ರಸಾರವಾಗಲಿವೆ. ಈ ತರಗತಿಗಳು ಬೆಳಗಿನ 8 ಗಂಟೆಯಿಂದ ಸಂಜೆ 4ರವರೆಗೆ ನಡೆಯಲಿದ್ದು, ತರಗತಿವಾರು ವೇಳಾಪಟ್ಟಿ ನಿಗದಿಪಡಿಸಲಾಗಿದೆ. ಮರಾಠಿ ಮಾಧ್ಯಮದ ಪಾಠಗಳನ್ನು ಯೂ-ಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

SCROLL FOR NEXT