ರಾಜ್ಯ

ಬೆಂಗಳೂರಿನಲ್ಲಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಭೀಕರ ಹತ್ಯೆ: ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ದುಷ್ಕರ್ಮಿಗಳು ಪರಾರಿ

Sumana Upadhyaya

ಬೆಂಗಳೂರು: ಮಹಾನಗರ ಬೆಂಗಳೂರಿನಲ್ಲಿ ಗುರುವಾರ ಬೆಳಗ್ಗೆಯೇ ಪಾಲಿಕೆಯ ಮಾಜಿ ಸದಸ್ಯೆಯ ಹತ್ಯೆಯಾಗಿದೆ. ಛಲವಾದಿಪಾಳ್ಯದ ಫ್ಲವರ್ ಗಾರ್ಡನ್ ನಲ್ಲಿ ಬಿಜೆಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಅವರ ಕಚೇರಿ ಮುಂದೆಯೇ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಒಳಗಿದ್ದ ರೇಖಾ ಕದಿರೇಶ್ ಅವರನ್ನು ಹೊರಗೆ ಕರೆದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ತೀವ್ರ ಹಲ್ಲೆ ನಡೆಸಿದ್ದಾರೆ. ರಕ್ತಸ್ರಾವವಾಗಿ ಕೆಳಗೆ ಬಿದ್ದ ಅವರನ್ನು ಸ್ಥಳದಲ್ಲಿದ್ದವರು ಕೂಡಲೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.ರೇಖಾ ಅವರು ಮೃತಪಟ್ಟ ಬಗ್ಗೆ ಆಸ್ಪತ್ರೆಯ ಡಾ ಸಂಜೀವ್ ಪಾಟೀಲ್ ಖಚಿತಪಡಿಸಿದ್ದಾರೆ.

ಬೆಂಗಳೂರಿನ ಫ್ಲವರ್ ಗಾರ್ಡನ್ ಸಮೀಪ ಈ ಘೋರ ಘಟನೆ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ನಡೆದಿದೆ. ಸುತ್ತಮುತ್ತ ಜನರು ವಾಸಿಸುತ್ತಿರುವ ಪ್ರದೇಶವಾಗಿದೆ. ರೇಖಾ ಕದಿರೇಶ್ ಅವರು ಕೆಲಸ ಮಾಡುತ್ತಿರುವ ಕಚೇರಿಯ ಹೊರಗೆ ಹಾಡಹಗಲೇ ಈ ಘಟನೆ ನಡೆದಿದ್ದು ಆಘಾತ ಮೂಡಿಸಿದೆ. ಚಿಕ್ಕಪೇಟೆ, ಕಾಟನ್ ಪೇಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಮೂರು ವರ್ಷಗಳ ಹಿಂದೆ ಪತಿಯೂ ಕೊಲೆ: ಹಳೆ ವೈಷಮ್ಯದಿಂದ ರೇಖಾ ಅವರ ಹತ್ಯೆ ನಡೆದಿದೆ ಎಂದು ಸಂಶಯ ವ್ಯಕ್ತಪಡಿಸಲಾಗಿದ್ದು ಮೂರು ವರ್ಷಗಳ ಹಿಂದೆ 2018ರ ಫೆಬ್ರವರಿ 7ರಂದು ರೇಖಾ ಅವರ ಪತಿ ಕದಿರೇಶ್ ಅವರನ್ನು ಸಹ ಇದೇ ರೀತಿ ದುಷ್ಕರ್ಮಿಗಳು ಕೊಚ್ಚಿ ಕೊಲೆಗೈದಿದ್ದರು. ಪತಿಯನ್ನು ಕೊಂದ ಮೂರು ವರ್ಷಗಳ ನಂತರ ಪತ್ನಿಯ ಹತ್ಯೆಯನ್ನು ದುಷ್ಕರ್ಮಿಗಳು ನಡೆಸಿದ್ದಾರೆ.

ಪೀಟರ್, ಸುರೇಶ್, ರಾಬರ್ಟ್ ಎಂಬುವವರೇ ಕೊಲೆಗೈದಿರಬಹುದು. ಟೆಂಡರ್ ಕರೆದ ವಿಚಾರದಲ್ಲಿ ವೈಮನಸ್ಯ ಉಂಟಾಗಿ ಕೊಲೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಆದಷ್ಟು ಶೀಘ್ರ ಆರೋಪಿಗಳ ಬಂಧನ: ಇಂದು ಬೆಳಗ್ಗೆ 10.30ರ ಹೊತ್ತಿಗೆ ಈ ದಾಳಿ ನಡೆದಿದ್ದು, ರೇಖಾ ಕದಿರೇಶ್ ಅವರು ಕಚೇರಿಯಿಂದ ಹೊರಗೆ ಬಂದ ಸಮಯದಲ್ಲಿ ದುಷ್ಕರ್ಮಿಗಳು ಈ ದಾಳಿ ನಡೆಸಿದ್ದಾರೆ. ರೇಖಾ ಅವರು ಕಚೇರಿ ಹೊರಗೆ ಬಡವರು, ನಿರ್ಗತಿಕರಿಗೆ ತಿಂಡಿ ಕೊಡುವ ಸಂದರ್ಭದಲ್ಲಿ ದಾಳಿ ನಡೆದಿದ್ದು ತೀವ್ರ ಸ್ವರೂಪದಲ್ಲಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬದುಕುಳಿಯಲಿಲ್ಲ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಮಾಧ್ಯಮ ಪ್ರತಿನಿಧಿಗಳ ಮುಂದೆ ಹೇಳಿದ್ದಾರೆ.

ಕುಟುಂಬದ ಹಳೆ ವೈಷಮ್ಯ, ಟೆಂಡರ್ ಕರೆಯುವ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿದ್ದವು ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗುತ್ತಿದ್ದು ಆದಷ್ಟು ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

SCROLL FOR NEXT