ರಾಜ್ಯ

ದೇವಾಲಯ ತೆರೆಯಲು ಶೀಘ್ರದಲ್ಲೇ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

Manjula VN

ಬೆಂಗಳೂರು: ಮುಂದಿನ ಹಂತದ ಅನ್‌ಲಾಕ್‌ ವೇಳೆ ಮುಜರಾಯಿ ವ್ಯಾಪ್ತಿಯ ದೇವಾಲಯಗಳನ್ನು ತೆರೆಯುವ ಸಂಬಂಧ ಸಿದ್ಧತೆಗಳು ಆರಂಭವಾಗಿದ್ದು, ಈ ಕುರಿತು ಶೀಘ್ರದಲ್ಲಿಯೇ ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

ಈ ಕುರಿತು ಪ್ರತಿಕ್ರಿಯೆ ಮುಜರಾಯಿ ಇಲಾಖೆಯ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು, ದೇವಾಲಯ ತೆರೆಯುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದ್ದು, ದೇವಾಲಯಗಳ ಬಾಗಿಲು ತೆರೆದಿದ್ದೇ ಆದರೆ, ಎಷ್ಟೆಷ್ಟು ಜನರು ಬರುತ್ತಾರೆಂಬುದು ತಿಳಿಯುತ್ತಿಲ್ಲ. ಕೊರೋನಾ ಸಾಂಕ್ರಾಮಿಕ ರೋಗ 3ನೇ ಅಲೆ ಆತಂಕ ಹಿನ್ನೆಲೆಯಲ್ಲಿ ಈ ಸಂದರ್ಭದಲ್ಲಿ ದೇವಾಲಯಗಳ ಬಾಗಿಲು ತೆರೆಯುವ ಸೂಕ್ತವಲ್ಲ ಎಂದು ಹೇಳಲಾಗುತ್ತಿದೆ ಎಂದು ಹೇಳಿದ್ದಾರೆ. 

ಈ ಕುರಿತು ತಜ್ಞರು ಹಾಗೂ ಆರೋಗ್ಯ ಇಲಾಕೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಇಲಾಖೆಯು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದೆ ಎಂದು ತಿಳಿಸಿದ್ದಾರೆ. 

ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡುತ್ತಿದ್ದಂತೆಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಅನುಮತಿ ಪಡೆಯಲಾಗುತ್ತದೆ ಎಂದಿದ್ದಾರೆ.

ರಾಜ್ಯದಲ್ಲಿ ಮುಜರಾಯಿ ಇಲಾಖೆಗೆ ಸೇರಿದ 34,000 ದೇವಾಲಾಯಗಳಿದ್ದು, ಲಾಕ್ಡೌನ್ ಹಿನ್ನೆಲೆಯಲ್ಲಿ ಕಳೆದ 54 ದಿನಗಳಿಂದ ಈ ದೇವಾಲಯಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ, ಕನಿಷ್ಟ ಸಂಖ್ಯೆಯ ಸಿಬ್ಬಂದಿಗಳೊಂದಿಗೆ ಎಂದಿನಂತೆ ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತಿದೆ. 

ಮಾರ್ಗಸೂಚಿಯಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಸಮಯ ನಿಗದಿಪಡಿಸುವ ಸಾಧ್ಯತೆಗಳಿವೆ. ಭಕ್ತರು ದೇವಾಲಯಗಳ ಭೇಟಿಗೆ ಅನುಮತಿ ನೀಡಿದ್ದೇ ಆದರೆ, ಎಷ್ಟು ಮಂದಿ ಪ್ರತೀನಿತ್ಯ ಭೇಟಿ ನೀಡಬಹುದು ಎಂಬುದನ್ನು ಸೂಚಿಸುವ ಸಾಧ್ಯತೆಗಳಿವೆ. ದೇವಾಲಯಗಳ ಬಾಗಿಲು ತೆರೆದಿದ್ದೇ ಆದರೆ, ಜನರನ್ನು ನಿಯಂತ್ರಿಸುವು ಕಷ್ಟಕರವಾಗಿರಲಿದೆ. ಹೀಗಾಗಿ ದೇವಾಲಯಕ್ಕೆ ಬರುವವರಿಗೆ ಕೋವಿಡ್ ನೆಗೆಟಿವ್ ವರದಿ ಅಥವಾ ಲಸಿಕೆ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಬೇಕು. ಈ ಕುರಿತು ಸಚಿವರು ಹಾಗೂ ಆರೋಗ್ಯ ಇಲಾಖೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಮುಜರಾಯಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈ ನಡುವೆ ಸಪ್ತಪದಿ ಕಾರ್ಯಕ್ರಮವನ್ನು ಪುನರಾರಂಭಿಸಲು ಮುಜರಾಯಿ ಇಲಾಖೆ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. 

ನಿಯಂತ್ರಿತ ಸಂಖ್ಯೆಯಲ್ಲಿ ವಿವಾಹ ಕಾರ್ಯಕ್ರಮ ನಡೆಸುವಂತೆ ಸರ್ಕಾರ ಸೂಚನೆ ನೀಡಿದೆ. ಸಾಮೂಹಿಕ ವಿವಾಹದಲ್ಲಿ ನಿಯಂತ್ರಿತ ಸಂಖ್ಯೆಯಲ್ಲಿ ಜನರು ಸೇರಬೇಕು ಎಂಬುದನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ ಕುರಿತು ಯಾವುದೇ ಆಲೋಚನೆಗಳನ್ನೂ ಮಾಡಿಲ್ಲ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು ತಿಳಿಸಿದ್ದಾರೆ. 

SCROLL FOR NEXT