ರಾಜ್ಯ

ಚನ್ನಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ಕೋರಿ ಪಿಐಎಲ್: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

Nagaraja AB

ಬೆಂಗಳೂರು: ರಾಮನಗರ ಜಿಲ್ಲೆಯ ಚನ್ನಪಟ್ಟಣದ ಒಳಚರಂಡಿ (ಯುಜಿಡಿ) ವ್ಯವಸ್ಥೆ ಒದಗಿಸುವಂತೆ ನಿರ್ದೇಶನ ನೀಡಬೇಕೆಂದು ಸ್ಥಳೀಯ ನಿವಾಸಿಗಳು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ರಾಜ್ಯಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ನೀಡಿದೆ.

ಚನ್ನಪಟ್ಟಣದ ಮಂಗಳವಾರ ಪೇಟೆಯ ಎಂ ಕೆ ಚಂದ್ರಶೇಖರ್ ಮತ್ತಿತರ 14 ಮಂದಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಾಧೀಶ ಸುರಾಜ್ ಗೋವಿಂದರಾಜ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ, ನಗಾರಭಿವೃದ್ಧಿ ಇಲಾಖೆ ಕಾರ್ಯದರ್ಶಿ, ಚನ್ನಪಟ್ಟಣ ನಗರ ಸಭೆ ಆಯುಕ್ತರು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮುಖ್ಯಸ್ಥರು ಹಾಗೂ ರಾಮನಗರ ಜಿಲ್ಲಾಧಿಕಾರಿಗೆ ನೋಟಿಸ್ ನೀಡಿದೆ.

ಕುನ್ನೇರಕಟ್ಟೆ, ರಾಮಮ್ಮನ ಕೆರೆ, ಕುಡ್ಲೂರು, ಸುಣ್ಣಘಟ್ಟ ಮತ್ತಿತರ ಕೆರೆಗಳಿಗೆ ಸಂಸ್ಕರಣೆ ಮಾಡದೆ ಚರಂಡಿ ನೀರನ್ನು ಬಿಡಲಾಗುತ್ತಿದೆ ಎಂದು ಆರೋಪಿಸಿರುವ ಅರ್ಜಿದಾರರು, ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ, ಕಣ್ವ ನದಿ  ಕೂಡಾ ಮುಂದೆ ವೃಷಭಾವತಿ ನದಿ ರೀತಿಯಲ್ಲಿ ಆಗುವ ಆಪಾಯವಿದೆ ಎಂದು ಹೇಳಿದ್ದಾರೆ. 

ಬೆಂಗಳೂರಿನಿಂದ 60 ಕಿ.ಮೀ ದೂರದಲ್ಲಿರುವ ಚನ್ನಪಟ್ಟಣ ಕುರಕುಶಲ ಕಲೆ, ರೇಷ್ಮೆ ಮತ್ತು ಪ್ರಾಚೀನ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ರಾಜ್ಯ ಮುನ್ಸಿಪಲ್ ಕಾಯ್ದೆ ಪ್ರಕಾರ, ರಾಜ ಕಾಲುವೆ ಒತ್ತುವರಿ ತಡೆಯುವಲ್ಲಿ ಸಂಬಂಧಿತ ಆಡಳಿತ ಸಂಸ್ಥೆಗಳು ವಿಫಲವಾಗಿವೆ.

ರೇಷ್ಮೆ ರೀಲಿಂಗ್ ಮತ್ತಿತರ ಕೈಗಾರಿಕೆಗಳು ಚರಂಡಿಗಳಿಗೆ ತ್ಯಾಜ್ಯ ನೀರನ್ನು ಹೊರಬಿಡದಂತೆ ತಡೆಯುವಲ್ಲಿ ಅವುಗಳು ವಿಫಲವಾಗಿದ್ದು, ನಿವಾಸಿಗಳ ಆರೋಗ್ಯದ ದೃಷ್ಟಿಯಿಂದ ನ್ಯಾಯಾಲಯದ ಮಧ್ಯಪ್ರವೇಶ ಅಗತ್ಯವಾಗಿದೆ ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ. 

ಇಗ್ಗಲೂರು ಬ್ಯಾರೇಜ್ ನಿಂದ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಈ ಕೆರೆಗಳು ಮತ್ತು ಕಣ್ಣ ಕೆರೆ ತಾಲೂಕಿನ ರೈತರ ಜೀವನಾಡಿಗಳಾಗಿವೆ. ಈ ಭಾಗದ ಜನರು ಕುಡಿಯುವ ನೀರಿಗಾಗಿ ಬೋರ್ ವೆಲ್ ಗಳ ಮೇಲೆ ಅವಲಂಬಿತರಾಗಿದ್ದಾರೆ. ಮಾಲಿನ್ಯ ತೆಡೆಗೆ ಕ್ರಮ ಕೈಗೊಳದಿದ್ದಲ್ಲಿ, ಆಂತರ್ಜಲ ಕಲುಷಿತವಾಗಿ, ಜನರ ಆರೋಗ್ಯ ಹಾಗೂ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ಅವರು ಹೇಳಿದ್ದಾರೆ. 

25 ವರ್ಷಗಳ ಹಿಂದೆ ನಗರಸಭೆಯಾಗಿರುವ ಚನ್ನಪಟ್ಟಣದಲ್ಲಿ 31 ವಾರ್ಡ್ ಗಳಿವೆ. ಒಳಚರಂಡಿ ವ್ಯವಸ್ಥೆ ಕಲ್ಪಿಸದೆ ಜನಸಂಖ್ಯೆ ಹಾಗೂ ಭೌಗೋಳಿಕ ಪ್ರದೇಶದ ಆಧಾರದ ಅನೇಕ ಹಳ್ಳಿಗಳನ್ನು ಸೇರಿದಂತೆ ನಗರಸಭೆಯನ್ನು ವಿಸ್ತರಿಸಲು ನಗರಾಭಿವೃದ್ಧಿ ಇಲಾಖೆ ಉದ್ದೇಶಿಸಿದೆ ಎಂದು ಅರ್ಜಿದಾರರು ದೂರಿನಲ್ಲಿ ಆರೋಪಿಸಿದ್ದಾರೆ.

SCROLL FOR NEXT