ರಾಜ್ಯ

ಬೈಕಲ್ಲಿ ಹೋಗುತ್ತಿದ್ದ ವೇಳೆ ಕತ್ತು ಕೊಯ್ದ ಗಾಳಿಪಟದ ದಾರ: ಚೈನೀಸ್ ಮಾಂಜಾ ನಿಷೇಧಿಸುವಂತೆ ಗಾಯಾಳು ಆಗ್ರಹ

Manjula VN

ಬೆಂಗಳೂರು: ಬೈಕ್ ಸವಾರನೊಬ್ಬನ ಕುತ್ತಿಗೆಗೆ ಗಾಳಿಪಟದ ದಾರ ಸಿಲುಕಿ ಕತ್ತು ಕೊಯ್ದಿರುವ ಘಟನೆ ನಗರದಲ್ಲಿ ನಡೆದಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೀಗ ಘಟನೆಗೆ ಕಾರಣವಾದ ಚೈನೀಸ್ ಮಾಂಜಾ (ನೈಲಾನ್ ದಾರ)ವನ್ನು ನಿಷೇಧಿಸುವಂತೆ ಗಾಯಾಳು ಯುವಕ ಆಗ್ರಹಿಸಿದ್ದಾನೆ. 

ಮಲ್ಲಿಕಾರ್ಜುನ್ ಎಂಬ ಯವಕನಿಗೆ ಕತ್ತು ಹಾಗೂ ಬೆರಳಿನಲ್ಲಿ ಗಾಯಗಳಾಗಿದ್ದು, ಈ ಸಂಬಂಧ ಯುವಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಲ್ಲ. ಆದರೆ, ಚೈನೀಸ್ ಮಾಂಜಾಗೆ ನಿಷೇಧ ಹೇರುವಂತೆ ಆಗ್ರಹಿಸಿದ್ದಾರೆ.

ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಮಲ್ಲಿಕಾರ್ಜುನ್ ಅವರು ಬೆಳಿಗ್ಗೆ ಬೈಕ್ ನಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್'ಗೆ ಹೋಗುತ್ತಿದ್ದರು. ಆಡುಗೋಡಿ ಸಂಚಾರ ಪೊಲೀಸ್ ಠಾಣೆ ಬಳಿ ಹೋಗುವಾಗ ಗಾಳಿಪಟದ ದಾರ ಮಲ್ಲಿಕಾರ್ಜುನ್ ಅವರ ಕುತ್ತಿಗೆಗೆ ಸಿಕ್ಕಿಕೊಂಡಿದೆ. ಪರಿಣಾಮ ಕುತ್ತಿಗೆ ಭಾಗದಲ್ಲಿ ಕುಯ್ದು ರಕ್ತ ಸ್ರಾವವಾಗಿದೆ. ಕುತ್ತಿಗೆಗೆ ಸಿಲುಕಿದ್ದ ದಾರ ಎಳೆಯುವ ಭರದಲ್ಲಿ ಯುವಕನ ಕೈ ಬೆರಳುಗಳಿಗೆ ಗಾಯವಾಗಿದೆ. 

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ಮಾತನಾಡಿರುವ ಯುವಕ, ಚೈನೀಸ್ ಮಾಂಜಾವನ್ನು ಸರ್ಕಾರ ಬ್ಯಾನ್ ಮಾಡಬೇಕೆಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಸ್ ಆಗಿದೆ. 

ನಾನು ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಹೆಲ್ಮೆಟ್ ಧರಿಸಿದ್ದೆ. ಈ ವೇಳೆ ಗಾಳಿಪಟದ ದಾರ ನನ್ನ ಕುತ್ತಿಗೆಗೆ ಸುತ್ತಿಕೊಂಡಿತ್ತು. ಕೂಡಲೇ ಅದನ್ನು ತೆಗೆಯಲು ಮುಂದಾದಾಗ ನನ್ನ ಬೆರಳುಗಳಿಗೂ ಗಾಯವಾಗಿತ್ತು. ಸರ್ಕಾರ ಹಾಗೂ ಬಿಬಿಎಂಪಿ ಅಧಿಕಾರಿಗಳು ಚೈನೀಸ್ ಮಾಂಜಾ ಮೇಲೆ ನಿಷೇಧ ಹೇರಬೇಕು. ಪಕ್ಷಿಗಳಿಗೂ ಅದು ಸಾವು ತರಬಹುದು. ಮನುಷ್ಯನಿಗೂ ಅಪಾಯಕಾರಿಯಾಗಿದೆ ಎಂದು ಯುವಕ ಮನವಿ ಮಾಡಿಕೊಂಡಿದ್ದಾರೆ. 

ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ, ಘಟನೆ ಬಗ್ಗೆ ನಮಗೆ ಮಾಹಿತಿ ಇಲ್ಲ. ಘಟನೆಯನ್ನು ಯಾವ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಬೇಕು ಎಂಬುದು ಗೊಂದಲ ಸೃಷ್ಟಿಸಿದೆ. ಘಟನೆ ಕಾನೂನು ಮತ್ತು ಸುವ್ಯವಸ್ಥೆ ಅಡಿಯಲ್ಲಿ ಬರುತ್ತದೆಯೇ ಅಥವಾ ಸಂಚಾರಿ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಬೇಕೇ ಎಂಬುದು ಅರ್ಥವಾಗುತ್ತಿಲ್ಲ ಎಂದಿದ್ದಾರೆ. 

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಮಾತನಾಡಿ, ಈಗಾಗಲೇ ಚೈನೀಸ್ ಮಾಂಜಾಗೆ ನಿಷೇಧ ಹೇರಲಾಗಿದೆ. ಇದಕ್ಕಾಗಿ ನಿಯಮಗಳನ್ನೂ ಜಾರಿಗೆ ತರಲಾಗಿದೆ. ನಿಷೇಧ ಹೇರಿದ್ದರೂ ಚೈನೀಸ್ ಮಾಂಜಾವನ್ನು ಖರೀದಿ ಮಾಡುತ್ತಿರುವವರು ಹಾಗೂ ಮಾರಾಟ ಮಾಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಘಟನೆಯನ್ನು ತನಿಖೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. 

SCROLL FOR NEXT