ರಾಜ್ಯ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣಾನೆ ಸಾವು

Manjula VN

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸುರಕ್ಷತಾ ವಲಯದಲ್ಲಿರುವ ರಾಗಿಹಳ್ಳಿ ಬಳಿ ಎರಡು ದಿನಗಳ ಹಿಂದಷ್ಟೇ ಹೆಣ್ಣಾನೆಯೊಂದು ಸಾವನ್ನಪ್ಪಿದ್ದು, ತಡವಾಗಿ ಬೆಳಕಿಗೆ ಬಂದಿದೆ. 

ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅರಣ್ಯಾಧಿಕಾರಿಗಳು, 35-40 ವರ್ಷದ ಹೆಣ್ಣಾನೆ ಇದಾಗಿದ್ದು, ಹೃದಯ ಸ್ತಂಭನದಿಂದ ಸಾವನ್ನಪ್ಪಿದೆ ಎಂದು ಹೇಳಿದ್ದಾರೆ. 

ಆನೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಲಾಗಿದ್ದು, ಹೃದಯ ಸ್ತಂಭನದಿಂದ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ ಎಂದು ತಿಳಿಸಿದ್ದಾರೆ. 

ಗುಡ್ಡದಿಂದ ಜಾರಿದ ಪರಿಣಾಮ ಹೃದಯ ಸ್ತಂಭನ ಎದುರಾಗಿದೆ. ಆನೆಯ ದೇಹದಲ್ಲಿ ಯಾವುದೇ ರೀತಿಯ ಗಾಯಗಳು ಬಂದಿಲ್ಲ. ಕಾಡಿನಲ್ಲಿದ್ದ ಕೆಲ ನಾಯಿಗಳು ಆನೆಯ ದೇಹದ ಕೆಲ ಭಾಗವನ್ನು ತಿಂದಿವೆ ಎಂದು ಮಾಹಿತಿ ನೀಡಿದ್ದಾರೆ. 

ಇದೇ ವೇಳೆ ಮಾನವ-ಪ್ರಾಣಿ ಸಂಘರ್ಷ ಕುರಿತ ವದಂತಿಗಳ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಘಟನೆ ಅರಣ್ಯ ಪ್ರದೇಶದೊಳಗೆ ನಡೆದಿದೆ. ಕಾಲು ಜಾರಿದ್ದರಿಂದ ಆನೆ ಸಾವನ್ನಪ್ಪಿದ್ದು, ಸ್ಥಳದಲ್ಲಿ 2-3 ಮರಗಳು ಧರೆಗುರುಳಿವೆ ಎಂದಿದ್ದಾರೆ. 

ಆನೆ ಆಹಾರ, ನೀರಿನ ಕೊರತೆಯಿಂದ ಸಾವನ್ನಪ್ಪಿಲ್ಲ. ಆನೆಯ ಹೊಟ್ಟೆಯಲ್ಲಿ ಅರ್ಧಂಬರ್ಧ ಜೀರ್ಣವಾಗಿರುವ ಆಹಾರ ಇರುವುದು ಕಂಡು ಬಂದಿದೆ. ಉದ್ಯಾನವನದಲ್ಲಿ ಆರೋಗ್ಯಕರ ಪ್ರಾಣಿಗಳಿದ್ದು, ಆನೆಗಳು ಗ್ರಾಮಗಳಿಗೆ ನುಗ್ಗದಂತೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ, ಹೀಗಾಗಿ ಇಲ್ಲಿ ಮಾನವ-ಪ್ರಾಣಿ ಸಂಘರ್ಷ ಯಾವುದೇ ಘಟನೆಗಳು ಈ ವರೆಗೂ ನಡೆದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. 

SCROLL FOR NEXT