ರಾಜ್ಯ

ಕೋವಿಡ್ ಸಂಕಷ್ಟ: ರಾಜ್ಯ ಕಾಂಗ್ರೆಸ್'ನಿಂದ ಮನೆ-ಮನೆ ಭೇಟಿ ಅಭಿಯಾನ 

Manjula VN

ಬೆಂಗಳೂರು: ರಾಜ್ಯದಲ್ಲಿ ಕೊರೋನಾದಿಂದ ಸಂಕಷ್ಟಕ್ಕೀಡಾದ ಕುಟುಂಬಗಳ ಕಷ್ಟ ಆಲಿಸಿ ಸಾಂತ್ವನ ಹೇಳಲು ಜು.1ರಿಂದ 30 ದಿನಗಳ ಕಾಲ ಕೊರೋನಾ ಯೋಧರು ಮನೆ-ಮನೆಗೆ ಭೇಟಿ ಅಭಿಯಾನ ಹಮ್ಮಿಕೊಳ್ಳಲಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ. 

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವು-ನೋವು ಉಂಡವರು, ಉದ್ಯೋಗ, ಆರೋಗ್ಯ ಕಳೆದುಕೊಂಡವರು, ಆರ್ಥಿಕವಾಗಿ ಸಂಕಷ್ಟಕ್ಕೀಡಾದ ರೈತರು, ಕಾರ್ಮಿಕರು, ಬಡವರು ಸೇರಿದಂತೆ ಎಲ್ಲಾ ವರ್ಗದವರ ಕಷ್ಟಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುವುದು. ಪಂಚಾಯಿತಿಯಿಂದ ಪಾರ್ಲಿಮೆಂಟ್ ಕ್ಷೇತ್ರದವರೆಗೂ, ಬ್ಲಾಕ್ ಮಟ್ಟದಿಂದ ಟೌನ್ ಗಳ ವರೆಗೂ ಕೊರೋನಾ ವಾರಿಯರ್ ಗಳನ್ನು ನೇಮಕ ಮಾಡಲಾಗುವುದು ಎಂದು ಹೇಳಿದ್ದಾರೆ. 

ಸ್ಥಳೀಯ ನಾಯಕರ ಮುಂದಾಳತ್ವದಲ್ಲಿ ಪ್ರತಿ ಬ್ಲಾಕ್ ನಲ್ಲಿ 10 ಸದಸ್ಯರ ತಂಡ ರಚಿಸಿ ಕನಿಷ್ಠ 200 ಕುಟುಂಬಗಳನ್ನು ಭೇಟಿ ಮಾಡಿ, ಸಾಂತ್ವನ ಹೇಳುವ ಗುರಿ ಹೊಂದಿದ್ದೇವೆ. ಆ ಕುಟುಂಬಗಳು ಏನೆಲ್ಲಾ ಸಂಕಷ್ಟ ಅನುಭವಿಸಿವೆ, ನಾವು ಹೇಗೆ ನೆರವಾಗಬಹುದು, ಸರ್ಕಾರದ ಮೇಲೆ ಒತ್ತಡ ಹಾಕಿ ಎನೆಲ್ಲಾ ನೆರವು ಕೊಡಿಸಬಹುದು ಎಂಬ ಮಾಹಿತಿ ಪಡೆಯಲಾಗುವುದು ಎಂದು ತಿಳಿಸಿದ್ದಾರೆ. 

ಈ ಬಗ್ಗೆ ಎಐಸಿಸಿಗೂ ವರದಿ ನೀಡಲಾಗೂವುದು. ಜನರ ಕಷ್ಟಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಲ್ಪಿಸುವಂತೆ ಒತ್ತಾಯಿಸಲಾಗುತ್ತದೆ ಎಂದಿದ್ದಾರೆ. 

ಕೊರೋನಾಗೆ ಬಲಿಯಾದವರ ಆಡಿಟ್ ಮಾಡಿ ಎಂದು ಕೇಳಿದರೂ ಆ ಬಗ್ಗೆ ಸರ್ಕಾರ ಚಿಂತನೆ ಮಾಡಿಲ್ಲ. ಕೇವಲ ಸೀಮಿತಿ ಮಾನದಂಡಗಳನ್ನು ಇಟ್ಟುಕೊಂಡು, ಕೆಲವರಿಗೆ ಮಾತ್ರ ರೂ.1 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿತು. ಇನ್ನು ಕೇಂದ್ರ ಸರ್ಕಾರ ರೂ.4 ಲಕ್ಷ ಪರಿಹಾರ ಕೊಡುವುದಾಗಿ ಘೋಷಿಸಿ, 8 ತಾಸುಗಳಲ್ಲಿ ಅದನ್ನು ಹಿಂಪಡೆಯಿತು. 20 ಲಕ್ಷ ಕೋಟಿ ಪ್ಯಾಕೇಜ್ ಯಾರಿಗೆ ನೀಡಿದ್ದಾರೆಂಬುದು ಗೊತ್ತಿಲ್ಲ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಭಿಯಾನ ಹಮ್ಮಿಕೊಂಡಿದ್ದೇವೆಂದು ವಿವರಿಸಿದರು. 

ಕೊರೋನಾದಿಂದ ಮೃತಪಟ್ಟವರ ಕುಟುಂಬದವರು ಪರಿಹಾರ ಪಡೆಯಲು ನೋಂದಣಿ ಮಾಡಿಸಿಕೊಳ್ಳುವ ದಿನಾಂಕ ಸರ್ಕಾರ 30ನೇ ತಾರೀಕಿನವರೆಗೆ ವಿಸ್ತರಿಸಿದ್ದು, ಹೀಗಾಗಿ ನಮ್ಮ ಕಾರ್ಯಕರ್ತು ಎಲ್ಲಾ ವರ್ಗದವರ ಮಾಹಿತಿ ಪಡೆದು, ನೋಂದಣಿ ಮಾಡಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ. ಸದ್ಯಕ್ಕೆ ಕಾಂಗ್ರೆಸ್ ನಾಯಕರಿಂದ ಕೈಲಾದಷ್ಟು ಸಹಾಯ ಮಾಡಲಾಗುವುದು. ಮುಂದೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದಿದ್ದಾರೆ. 

SCROLL FOR NEXT