ರಾಜ್ಯ

ಲಾಕ್ ಡೌನ್, ನೌಕರರ ಮುಷ್ಕರದಿಂದ ಕೆಎಸ್ ಆರ್ ಟಿಸಿಗೆ 4,000ಕೋಟಿ ರೂ ನಷ್ಟ- ಲಕ್ಷ್ಮಣ ಸವದಿ

Nagaraja AB

ಬೆಳಗಾವಿ: ಲಾಕ್ ಡೌನ್ ಮತ್ತು ನೌಕರರ ಮಷ್ಕರದಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ ಆರ್ ಟಿಸಿ) ಕಳೆದ 15 ತಿಂಗಳಲ್ಲಿ 4,000 ಕೋಟಿ ರೂ ನಷ್ಟ ಅನುಭವಿಸಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಶನಿವಾರ ತಿಳಿಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಮೊದಲನೇ ಅಲೆ ನಂತರ ಕೆಎಸ್ ಆರ್ ಟಿಸಿ ನೌಕರರು ಮುಷ್ಕರಕ್ಕೆ ಇಳಿದರು. ಮುಷ್ಕರ ಕೊನೆಗೊಳಿಸುತ್ತಿದ್ದಂತೆ ಸಾಂಕ್ರಾಮಿಕದ ಎರಡನೇ ಅಲೆ ಆರಂಭವಾಯಿತು. ಇಲಾಖೆ ಅಪಾರ ನಷ್ಟ ಎದುರಿಸಿದರೂ ಇಲಾಖೆ ನೌಕರರಿಗೆ ಪೂರ್ಣ ವೇತನ ಪಾವತಿಸಿದೆ. ಹಣಕಾಸು ಬೇಡಿಕೆಗಳನ್ನು ಪೂರೈಸಲು ಸರ್ಕಾರ 2,600 ಕೋಟಿ ರೂ ಒದಗಿಸಿದೆ ಎಂದು ಹೇಳಿದರು.

ಸದ್ಯ, ಶೇ 50ರಷ್ಟು ಪ್ರಯಾಣಿಕ ಸಾಮರ್ಥ್ಯದೊಂದಿಗೆ ಬಸ್  ಗಳು ಸಂಚರಿಸುತ್ತಿವೆ. ಇದರಿಂದ ಬರುವ ಆದಾಯವು ಇಂಧನ ಮತ್ತು ಸಂಬಳಗಳಿಗೆ ಸಾಕಾಗುತ್ತಿಲ್ಲ. ವೇತನಗಳನ್ನು ಪಾವತಿಸಲು ಸರ್ಕಾರವನ್ನು ಕೋರಲಾಗುವುದು. ಇದು ಅನಿವಾರ್ಯವೂ ಆಗಿದೆ ಎಂದರು.

ಮುಂದಿನ ತಿಂಗಳ 5ರಿಂದ ಮುಷ್ಕರಕ್ಕೆ ಇಳಿಯವುದಾಗಿ ಕೆಲ ಕಾರ್ಮಿಕ ಸಂಘಟನೆಗಳು ಬೆದರಿಕೆ ಒಡ್ಡುತ್ತಿವೆ. ಆದರೆ, ಸಂಘಟನೆಗಳ ನಾಯಕರು ಬಿಕ್ಕಟ್ಟಿನ ಈ ಸಮಯದಲ್ಲಿ ಮುಷ್ಕರ ನಡೆಸುವುದಿಲ್ಲ ಎಂಬ ಭರವಸೆ ನೀಡಿದ್ದಾರೆ. ಕೆಲ ಪಿತೂರಿಗಳಿಂದ ತಾವು ಈ ಹಿಂದೆ ಮುಷ್ಕರಕ್ಕೆ ಇಳಿಯಬೇಕಾಯಿತು ಎಂದು ಮಾತುಕತೆಗಳ ವೇಳೆ ಸಂಘಟನೆಗಳ ನಾಯಕರು ಒಪ್ಪಿಕೊಂಡಿದ್ದಾರೆ ಎಂದು ಲಕ್ಷ್ಮಣ ಸವದಿ ಹೇಳಿದರು.

SCROLL FOR NEXT