ರಾಜ್ಯ

ನಾಡಪ್ರಭು ಕೆಂಪೇಗೌಡ ಜಯಂತಿ: ವಿಧಾನಸೌಧದಲ್ಲಿ ಅಂಚೆ ಚೀಟಿ ಬಿಡುಗಡೆಗೊಳಿಸಿದ ಸಿಎಂ ಯಡಿಯೂರಪ್ಪ

Manjula VN

ಬೆಂಗಳೂರು: ನಾಡಪ್ರಭು ಕೆಂಪೇಗೌಡರ 512ನೇ ಜಯಂತಿ ಪ್ರಯುಕ್ತ ಮುಖ್ಯಮಂತ್ರಿ ಯುಡಿಯೂರಪ್ಪ ಅವರು ಭಾನುವಾರ ಕೆಂಪೇಗೌಡರ ಅಂಚೆ ಚೀಟಿ ಲೋಕಾರ್ಪಣೆಗೊಳಿಸಿದರು. 

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಇಂದು ನಡೆದ ನಾಡಪ್ರಭುಗಳ ಜಯಂತಿ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಅಂಚೆ ಚೀಟಿಯನ್ನು ಲೋಕಾರ್ಪಣೆಗೊಳಿಸಿದರು. 

ಕಾರ್ಯಕ್ರಮದಲ್ಲಿ ಡಿಸಿಎಂ ಅಶ್ವಥ್ ನಾರಾಯಣ, ಸಚಿವ ಗೋಪಾಲಯ್ಯ, ಶಾಸಕ ಮುನಿರತ್ನ, ಸಂಸದ ಪಿಸಿ ಶಾಸಕ ಮಂಜುನಾಥ್ ಸಂಸದ ಪಿಸಿ ಮೋಹನ್,  ಡಿಸಿಎಂ ಗೋವಿಂದ್ ಕಾರಜೋಳ , ಶಾಸಕ ರಿಜ್ವಾನ್ ಅರ್ಷದ್, ಹೆಚ್ ಆರ್ ವಿಶ್ವನಾಥ್, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಗುರುಗುಂಡ ಬ್ರಹ್ಮೇಶ್ವರ ಮಠ ನಂಜಾವಧೂತ ಸ್ವಾಮೀಜಿ ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, ಇಂದು ನಾಡಪ್ರಭು ಕೆಂಪೇಗೌಡರ ಜಯಂತಿ. ಬಹಳ ಸಂತೋಷದಿಂದ ಈ ಕಾರ್ಯಕ್ರಮ ಮಾಡಲಾಗುತ್ತಿದೆ. ಮುಖ್ಯಮಂತ್ರಿಗಳ ಆಶೀರ್ವಾದದೊಂದಿಗೆ ಕಂಚಿನ ಪುತ್ಥಳಿ ರೆಡಿಯಾಗುತ್ತಿದೆ. ಬಹಳ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುತ್ತಿದೆ. 2008 ರಲ್ಲಿ ಹಾಗೂ 2019 ರಲ್ಲಿ ಅಧಿಕಾರ ವಹಿಸಿದಾಗಲೂ ಪಾರಂಪರಿಕ ಕಟ್ಟಡಗಳನ್ನು ಅಭಿವೃದ್ಧಿಗೊಳಿಸಲು ನಿರ್ಧಾರ ಮಾಡಿದ್ದಾರೆ.  2019 ರಲ್ಲಿ ಅಧಿಕಾರ ವಹಿಸಿದಾಗ ಮೊದಲು ಮಾಡಿದ ಕೆಲಸ ಅವರ ಪುತ್ಥಳಿ ನಿರ್ಮಾಣ ಕಾರ್ಯ. 23 ಎಕರೆ ಜಾಗದಲ್ಲಿ ನಿರ್ಮಾಣ ಮಾಡಲು ನಿರ್ಧಾರ ಮಾಡಿದ್ದಾರೆ. ಮುಂದಿನ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಇದರ ಲೋಕಾರ್ಪಣೆ ಆಗಲಿದೆ ಎಂದು ಹೇಳಿದರು.

ಮುಂದುವರೆದ ಅವರು,  ಕೆಂಪಾಪುರದಲ್ಲೂ ಕೆಂಪೇಗೌಡರ ವೀರ ಸಮಾಧಿಯನ್ನು ಅಭಿವೃದ್ಧಿ ಮಾಡಲು ಕ್ರಮ ಕೈಗೊಳ್ಳಲಾಗಿದೆ.  ಬೆಂಗಳೂರು ಬೇರೆ ಬೇರೆ ಹೆಸರು ಪಡೆದಿದೆ. ಕೆಂಪೇಗೌಡ ಜಯಂತಿಯನ್ನ ಬೆಂಗಳೂರು ಹಬ್ಬವಾಗಿ ಆಚರಣೆ ಮಾಡಬೇಕು. ಈ ಹಬ್ಬ ಮಾಡಲು ಕಳೆದ ಎರಡು ವರ್ಷಗಳ ಹಿಂದೆಯೇ ಚಿಂತನೆ ನಡೆದಿತ್ತು. ಆದರೆ ಕೊರೋನಾದಿಂದಾಗಿ ತಡೆಯಲಾಗಿತ್ತು. ಮುಂದಿನ ದಿನಗಳಲ್ಲಿ ಸೋಂಕು ಕಡಿಮೆಯಾದ ನಂತರ ಆಚರಣೆ ಮಾಡಬೇಕು. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದಿಂದ ಹಲವಾರು ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಇದೇ ವೇಳೆ ನಮ್ಮ‌ ಮೆಟ್ರೋ ಹೆಸರನ್ನು ನಮ್ಮ ಕೆಂಪೇಗೌಡ ಮೆಟ್ರೋ ಅಥವಾ ಕೆಂಪೇಗೌಡ ಮೆಟ್ರೋ ಎಂದಾದರೂ ಬದಲಿಸಿ ಎಂದು ನಂಜಾವಧೂತ ಸ್ವಾಮೀಜಿ ಸಿಎಂ ಯಡಿಯೂರಪ್ಪನವರಿಗೆ ಮನವಿ ಮಾಡಿದರು. ವಿಧಾನಸೌಧದಲ್ಲೂ ಒಂದು ಕೆಂಪೇಗೌಡ ಪ್ರತಿಮೆ ಸ್ಥಾಪನೆ ಮಾಡುವಂತೆಯೂ ಯಡಿಯೂರಪ್ಪನವರಿಗೆ ಮನವಿ ಮಾಡಿಕೊಂಡರು. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಕ್ಕೂ ಅತ್ಯುತ್ತಮ ಅಧ್ಯಕ್ಷರ ನೇಮಕ ಮಾಡಿ ಎಂದು ನಂಜಾವಧೂತ ಸ್ವಾಮೀಜಿ ಹೇಳಿದರು.

ಟ್ವಿಟರ್​ನಲ್ಲಿ ಶುಭಾಶಯ ಕೋರಿದ ಸಿಎಂ ಯಡಿಯೂರಪ್ಪ
ನಾಡಪ್ರಭು ಕೆಂಪೇಗೌಡರ 512ನೇ ಜಯಂತಿ ಹಿನ್ನೆಲೆ, ನೂರಾರು ಕೆರೆಗಳನ್ನು ನಿರ್ಮಾಣ ಮಾಡಿ. ವ್ಯಾಪಾರ ವಹಿವಾಟಿಗೆ ಅನೇಕ ಪೇಟೆಗಳನ್ನು ಕಟ್ಟಿ. ಅತ್ಯಂತ ಯೋಜನಾಬದ್ಧವಾಗಿ ಬೆಂಗಳೂರನ್ನು ನಿರ್ಮಿಸಿದ ಕೆಂಪೇಗೌಡರ ಸಂಸ್ಮರಣೆಗಳ ಜೊತೆಗೆ ಆ ಧೀಮಂತ ಆಡಳಿತಗಾರನಿಗೆ ಅನಂತ ಪ್ರಣಾಮ ಸಲ್ಲಿಸೋಣ ಎಂದು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವಿಟರ್​ನಲ್ಲಿ ಶುಭಾಶಯ ಕೋರಿದ್ದಾರೆ.

SCROLL FOR NEXT