ರಾಜ್ಯ

ವಾರದ ಸಂತೆ ಬಂದ್; ಬೆಳಿಗ್ಗೆ 6ರಿಂದ 12ರವರೆಗೆ ದಿನಸಿ ಅಂಗಡಿ, ಎಪಿಎಂಸಿ ಮಾರುಕಟ್ಟೆ ತೆರೆಯಲು ಅವಕಾಶ: ರಾಜ್ಯ ಸರ್ಕಾರದ ಆದೇಶ

Srinivasamurthy VN

ಬೆಂಗಳೂರು: ರಾಜ್ಯದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಪ್ರಮಾಣ ಹೆಚ್ಚಾಗಿರುವಂತೆಯೇ ಇತ್ತ ಕರ್ನಾಟಕ ಸರ್ಕಾರ ಕೋವಿಡ್ ಮಾರ್ಗ ಸೂಚಿಗಳಲ್ಲಿ ಬದಲಾವಣೆ ಮಾಡಿದ್ದು, ವಾರದ ಸಂತೆಗಳನ್ನು ಬಂದ್ ಮಾಡಿ ಆದೇಶ ನೀಡಿದೆ.

ಹೌದು..ದಿನಸಿ ಮತ್ತು ಎಪಿಎಂಸಿ ಮಾರುಕಟ್ಟೆಯನ್ನು ಬೆಳಿಗ್ಗೆ 6 ಗಂಟೆಯಿಂದ 12ರವರೆಗೆ ತೆರೆಯಲು ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಇದರೊಂದಿಗೆ ವಾರದ ಸಂತೆಗಳನ್ನು ಬಂದ್ ಮಾಡಿದೆ. ಮೇ 2ರ ಭಾನುವಾರದಿಂದ ಅನ್ವಯವಾಗುವಂತೆ ಈ ಪರಿಷ್ಕೃತ ಆದೇಶ ಜಾರಿಯಲ್ಲಿರಲಿದೆ  ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.

ಖರೀದಿ ವೇಳೆ ಮಾರುಕಟ್ಟೆಯಲ್ಲಿ ಆಗುತ್ತಿರುವ ನೂಕುನುಗ್ಗಲು, ಜನಸಂದಣಿ ತಪ್ಪಿಸಲು ಈ ಉಪಕ್ರಮ ಕೈಗೊಳ್ಳಲಾಗಿದೆ. ವಾರದ ಸಂತೆ ಸೇರಿದಂತೆ ಎಲ್ಲ ರೀತಿಯ ಸಂತೆಗಳನ್ನೂ ನಿರ್ಬಂಧಿಸಲಾಗಿದೆ. ಅದರ ಬದಲಿಗೆ ಹಾಪ್‌ಕಾಮ್ಸ್‌, ಹಾಲಿನ ಬೂತ್‌ಗಳು, ತಳ್ಳುಗಾಡಿಗಳ ಮೂಲಕ ತರಕಾರಿ, ಹಣ್ಣು ಮಾರಾಟ  ಮಾಡುವವರು ಹಾಗೂ ದುಬಾರಿ ಬೆಲೆಗೆ ಮಾರದೇ ಮಾರುಕಟ್ಟೆ ದರದಲ್ಲಿ ವ್ಯಾಪಾರ ಮಾಡುವವರಿಗೆ ಬೆಳಿಗ್ಗೆ 6ರಿಂದ ಸಂಜೆ 6ರವರೆಗೂ ಅವಕಾಶ ನೀಡಲಾಗಿದೆ. ವ್ಯಾಪಾರಿಗಳು ಮಾರುಕಟ್ಟೆ ದರದಲ್ಲಿ ಹಣ್ಣು, ತರಕಾರಿ ಮಾರಾಟ ಮಾಡಬೇಕು. ಹೆಚ್ಚಿನ ಬೆಲೆಗೆ ಮಾರಾಟ ಮಾಡುವಂತಿಲ್ಲ ಎಂಬ ಷರತ್ತಿನೊಂದಿಗೆ  ಅವಕಾಶ ಒದಗಿಸಲಾಗಿದೆ. ಬಿಬಿಎಂಪಿ, ಪೊಲೀಸ್ ಕಮಿಷನರ್, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಆದೇಶವನ್ನು ಜಾರಿ ಮಾಡಲು ಅವರು ಸೂಚಿಸಿದ್ದಾರೆ.

ಇನ್ನು ಕರ್ನಾಟಕದಲ್ಲಿ ಶನಿವಾರ ಅಂದರೆ ಮೇ 1, ಒಟ್ಟು 40,990 ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದೆ. 271 ಜನರು ಮೃತಪಟ್ಟಿದ್ದಾರೆ. ಬೆಂಗಳೂರು ನಗರದಲ್ಲಿ ಅತಿಹೆಚ್ಚು, ಅಂದರೆ 19,353 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. 162 ಜನರು ಸಾವನ್ನಪ್ಪಿದ್ದಾರೆ. ಸತತವಾಗಿ 30 ಸಾವಿರದ  ಆಸುಪಾಸಿನಲ್ಲಿ ಬರುತ್ತಿದ್ದ ರಾಜ್ಯದ ಸೋಂಕಿತರ ಸಂಖ್ಯೆ ನಿನ್ನೆಯಿಂದ 40 ಸಾವಿರದ ಗಡಿ ದಾಟುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 15,64,132ಕ್ಕೆ (15.64 ಲಕ್ಷ) ಏರಿಕೆಯಾಗಿದೆ. ಈ ಪೈಕಿ 11,43,250 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ  ಸೋಂಕಿನಿಂದ 271 ಜನರ ಸಾವನ್ನಪ್ಪಿದ್ದಾರೆ. ಈವರೆಗೆ ಕೊರೊನಾದಿಂದ ಮೃತಪಟ್ಟವರ ಒಟ್ಟು ಸಂಖ್ಯೆ 15,794ಕ್ಕೆ ಏರಿಕೆಯಾಗಿದೆ. 4,05,068 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

SCROLL FOR NEXT